ಶಾಸಕ ಸಿ.ಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ-ಡಾ.ಅಶ್ವತ್ಥ ನಾರಾಯಣ್.

120
firstsuddi

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಿ.ಪಿ ಯೋಗೀಶ್ವರ್ ಅವರು ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಇಂದು ಉಡುಪಿಗೆ ಆಗಮಿಸಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವಿದೆ. ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ. ಅಲ್ಲದೇ ನಮ್ಮ ಅಭಿಪ್ರಾಯವೂ ಅದೇ ಆಗಿದೆ. ಈ ಬಗ್ಗೆ ಕೇಂದ್ರದ ವರಿಷ್ಠರು ಮತ್ತು ಮುಖ್ಯಮಂತ್ರಿ ಅವರು ಸಮಾಲೋಚನೆ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸಾಕಷ್ಟು ಗಮನಸೆಳೆದಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಒಂದು ಜಟಿಲ ವಿಚಾರವಾಗಿದೆ. ಅಲ್ಪಾವಧಿಯಲ್ಲಿ ಎಲ್ಲವೂ ಗೊತ್ತಾಗಲಿದೆ. ಬೇರೆಡೆ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಸ್ಥಾನ ನೀಡುವುದು ಮೂಲ ಬಿಜೆಪಿಗರಿಗೆ ಬೇಸರ ವಿಚಾರವಾದರೂ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ವಲಸೆ ಬಂದವರೂ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾರೆ. ಬಿಜೆಪಿಯಲ್ಲಿದ್ದಾಗ ಎಲ್ಲರೂ ಒಂದೇ. ಒಳಗೆ ಹೊರಗೆ ಅನ್ನೋ ಭಾವನೆ ಸರಿಯಲ್ಲ, ತಾರತಮ್ಯಕ್ಕೆ ಅವಕಾಶ ಇಲ್ಲ. ಎಲ್ಲರನ್ನೂ ಕುಟುಂಬದ ರೀತಿ ಜೋಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಅವರು ಹೇಳಿದರು.

ಬೆಂಗಳೂರಿನಲ್ಲಿ ಇಂದು ಸಚಿವ ಸಂಪುಟ ಸಭೆಯು ತ್ವರಿತವಾಗಿ ನಿಶ್ಚಯವಾಗಿದ್ದರಿಂದ ಯಾರಿಗೂ ಗೊತ್ತಿರಲಿಲ್ಲ. ಹೆಚ್ಚಿನವರು ಪೂರ್ವ ನಿಗದಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ಸಂಪುಟ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ. ದಿಲ್ಲಿಯಲ್ಲಿ ಸಿ.ಟಿ.ರವಿ ಅವರ ಕಚೇರಿ ಉದ್ಘಾಟನೆಗಾಗಿ ಅನೇಕ ಸಚಿವರು ತೆರಳಿದ್ದಾರೆ. ನಾನು ಗ್ರಾಮ ಸ್ವರಾಜ್ ಸಮಾವೇಶದ ಪ್ರವಾಸದಲ್ಲಿದ್ದೇನೆ ಎಂದರು.
ಲಿಂಗಾಯತರಿಗೆ ಹಿಂದುಳಿದ ವರ್ಗದ ಮೀಸಲಾತಿ ನಿನ್ನೆಯಷ್ಟೇ ಬಂದಿದೆ. ಈ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಇವತ್ತು ಕಾಬಿನೆಟ್ ನಲ್ಲಿ ಚರ್ಚೆ ಆಗಿರುತ್ತದೆ. ಎಲ್ಲರೂ ಭಾವನೆ ಹಾಗೂ ಅವಶ್ಯಕತೆಗಳನ್ನು ವೈಜ್ಞಾನಿಕವಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾರು ಯಾರಿಗೆ ಏನೇನು ಸಲ್ಲಬೇಕೋ ಅದನ್ನು ಸಲ್ಲಿಸುವ ಕೆಲಸ ಸರ್ಕಾರ ಮಾಡುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಅವರು ಹೇಳಿದರು.