ಮೂಡಿಗೆರೆ:ದಾರದಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧ ಆಯ್ಕೆ…

625
firstsuddi

ಮೂಡಿಗೆರೆ: ದಾರದಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸತ್ಯ ಅಣ್ಣಿಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಗೋಪಮ್ಮ, ಇವರನ್ನು ನೂತನವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರಾದ ಡಿ.ಆರ್ ಉಮಾಪತಿಯವರು ನಮ್ಮ ದಾರದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗದಿಂದ ಪ್ರಪ್ರಥಮವಾಗಿ ಮಹಿಳೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಇದು ಹಿಂದುಳಿದ ವರ್ಗದ ಮಹಿಳೆಯರಿಗೆ ಸಿಕ್ಕ ಗ್ರಾಮದ ಮತ್ತೊಂದು ಶಕ್ತಿಯಾಗಿದೆ. ಆಡಳಿತಾತ್ಮಕ ವ್ಯವಸ್ಥೆಯಡಿಯಲ್ಲಿ ನಿಮಗೇನಾದರೂ ನಮ್ಮಿಂದ ಸಹಾಯ ಬೇಕಾದಲ್ಲಿ ನಮ್ಮನ್ನು ಕೇಳಿ ಅದಕ್ಕೆ ನಾವು ಮತ್ತು ಇಲ್ಲಿನ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳ ಬೆಂಬಲವಿರುತ್ತದೆ ಎಂದರು.

ಗ್ರಾಮ ಪಂಚಾಯಿತಿಯ ಮಾಜಿ ಪ್ರಧಾನರಾದ ಮಗ್ಗಲಮಕ್ಕಿ ಲಕ್ಷ್ಮಣ್ ಗೌಡರು ಮಾತನಾಡಿ ನ್ಯಾಯ ಸಮ್ಮತವಾಗಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದಾಗ ಮಾತ್ರ ಆದರ್ಶ ವ್ಯಕ್ತಿತ್ವದೊಂದಿಗೆ ಆದರ್ಶ ಗ್ರಾಮ ನಿರ್ಮಿಸಲು ಸಾಧ್ಯ. ತನಗೆ ಸಿಕ್ಕಿರುವ ಅಧಿಕಾರ ಕೇವಲ ಅಲ್ಪ ಸಮಯಕ್ಕೆಂದು ಬೇಸರ ಪಡದೆ ಅಧಿಕಾರದ ದಾಹ ಮರೆತು ಎಲ್ಲರು ಅಧಿಕಾರವನ್ನು ಹಂಚಿಕೊಳ್ಳಬೇಕು. ಕೇವಲ ಅಲ್ಪ ಅವಧಿಯಲ್ಲೇ ದೀರ್ಘಾವಧಿ ಕೆಲಸ ಮಾಡಿದರೆ ಮುಂದಿನ ಪೀಳಿಗೆಗೆ ಇದೊಂದು ಮಹತ್ತರ ಕೊಡುಗೆ ಹಾಗೂ ಆದರ್ಶ ವ್ಯಕ್ತಿತ್ವ ಜೀವನಕ್ಕೆ ನಾಂದಿಯಾಗುತ್ತದೆ. ವೈಯಕ್ತಿಕ ಬದುಕಿಗಿಂತ ಸಾರ್ವಜನಿಕ ಬದುಕು ನಮಗೆ ಹೆಚ್ಚು ಖುಷಿಯನ್ನು ನೀಡುತ್ತದೆ ಎಂದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರೇಶ್ ಕಾರ್ಯಕ್ರಮದ ಕುರಿತು ಮಾತನಾಡಿ ಕೇವಲ ನಾಮಫಲಕದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರುಗಳು ಕಾಣುವುದಕ್ಕಾಗಿ ಕೆಲಸವನ್ನು ಮಾಡಬೇಡಿ. ನಿಮ್ಮ ನಿಮ್ಮ ಅವಧಿಯಲ್ಲಿ ನೀವು ಮಾಡಿದಂತಹ ಕೆಲಸ ಕಾರ್ಯಗಳು ಬೇರೆಯವರಿಗೆ ಮಾದರಿಯಾಗಬೇಕು. ಅಂತಹ ಹೆಜ್ಜೆಯನ್ನು ನೀವು ಇಟ್ಟು ಪ್ರತಿಯೊಬ್ಬರಿಗೂ ತಿಳಿಸಿಕೊಡಿ ಎಂದರು.

ತನ್ನ ಅಧಿಕಾರವಧಿಯಲ್ಲಿ ಅತ್ಯಧಿಕ ಪಾರದರ್ಶಕತೆಯಿಂದ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಿದ ಪ್ರಸ್ತುತ ಉಪಾಧ್ಯಕ್ಷರಾದ ಸಿದ್ದೇಶ್ ರವರು ತನ್ನ ಸ್ಥಾನದಲ್ಲಿರುವಂತಹ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಅವರನ್ನು ಇಡೀ ಗ್ರಾಮದ ಜನರೇ ಹೊಗಳುತ್ತಿದ್ದಾರೆ. ಮೊದಲು ಇಂತವರಿಗೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಂಜನ್ ಅಜಿತ್ ಕುಮಾರ್ ರವರು ಇವರನ್ನು ಈ ವೇದಿಕೆಯಲ್ಲಿ ಕೊಂಡಾಡಿದ್ದು, ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಇಲ್ಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗೈರಾಗಿದ್ದು, ಇದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.  ಇಲ್ಲಿನ ಸಾರ್ವಜನಿಕರ ಕೆಲಸಕ್ಕೇನಾದರೂ ಪಂಚಾಯಿತಿಗೆ ಬಂದಂತಹ ಸಂದರ್ಭದಲ್ಲಿ ಅವರನ್ನು ಕಾಯಿಸದೇ ಅಥವಾ ಯಾವುದೇ ರಾಜಕಾರಣಿಗಳ ಪ್ರಭಾವಕ್ಕೆ ಕಾಯಬೇಡಿ ತಮ್ಮ ಕೆಲಸದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪಂಚಾಯಿತಿ ಅಧ್ಯಕ್ಷರಾದ ಶಾಂತ ರಘು, ಉಪಾಧ್ಯಕ್ಷರಾದ ಸಿದ್ದೇಶ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಳಾದ ಡಿ.ಬಿ ಜಯಪ್ರಕಾಶ್, ಜಯರಾಮ್, ಕಾಂಗ್ರೆಸ್ ಮುಖಂಡರಾದ ಡಿ.ಆರ್ ರಘುಪತಿ, ಡಿ.ಬಿ ರಾಜೀವ್, ಪಂಚಾಕ್ಷರಿ, ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬ್ರೀಜೇಶ್, ಸೇರಿದಂತೆ ಗ್ರಾಮಸ್ಥರು ಇದ್ದರು.