ಮಂಗಳೂರು: ರಾಯಲ್ ಎನ್ ಫಿಲ್ಡ್ ಬುಲೆಟ್ ಬೈಕ್ ಕಳವುಗೈದ ಆರೋಪದಲ್ಲಿ ಅಪ್ರಾಪ್ತ ಬಾಲಕನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಕೇರಳದ ಮಂಜೇಶ್ವರ ಮೂಲದ ಅಪ್ರಾಪ್ತ ಬಾಲಕ ಬೈಕ್ ಕಳವು ಆರೋಪಿ ಎಂದು ಗುರುತಿಸಲಾಗಿದ್ದು, ಆರೋಪಿಯಿಂದ ರೂ 1.65 ಲಕ್ಷ ಮೌಲ್ಯದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಅಪ್ರಾಪ್ತ ಆರೋಪಿಯು ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಫೆ 15 ರಂದು ಕಂಕನಾಡಿ ಹಳೆಯ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರಿಂದ ಬುಲೆಟನ್ನು ಕಳವುಗೈದಿದ್ದು, ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಕಳವುಗೈದ ಬೈಕ್ ಅನ್ನು ಮಾರಾಟ ಮಾಡಲು ಮಂಗಳೂರಿಗೆ ಬಂದ ಸಮಯದಲ್ಲಿ ನಗರದ ನಂತೂರು ಬಳಿ ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.










