ಮೂಡಿಗೆರೆ : ಕಸ್ತೂರಿ ರಂಗನ್ ವರದಿ ಹಿಂಪಡೆಯುವಂತೆ ಶ್ರೀ ರಾಮಸೇನೆ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ.

332
firstsuddi

ಮೂಡಿಗೆರೆ : ಕಸ್ತೂರಿ ರಂಗನ್ ವರದಿ ವಿರೋಧಿಸಿ ಶ್ರೀ ರಾಮಸೇನೆ ಮೂಡಿಗೆರೆ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಅವರಿಗೆ ನೀಡಲಾಯಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ತಾಲ್ಲೂಕು ಅಧ್ಯಕ್ಷ ಕುಂದೂರು ಅಜಯ್ ಅವರು, ಕಸ್ತೂರಿ ರಂಗನ್ ವರದಿಯು ಮಲೆನಾಡಿನ ಭಾಗದ ಹಲವು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಲಿದೆ. ಈ ವರದಿ ಜಾರಿಯಾದರೆ ನೂರಾರು ವರ್ಷಗಳಿಂದ ಕೃಷಿ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಬೀದಿಗೆ ಬೀಳುತ್ತವೆ. ವರದಿಯಲ್ಲಿ ಹಲವು ತಪ್ಪುಗಳಿವೆ. ವಾಸ್ತವದಲ್ಲಿ ವರದಿ ಜಾರಿಯಿಂದ ಅನುಕೂಲಕ್ಕಿಂತ ತೊಂದರೆಗಳೇ ಹೆಚ್ಚು. ಅದರಲ್ಲಿಯೂ ಎರಡು ವರ್ಷಗಳಿಂದ ಬೀಳುತ್ತಿರುವ ಅಪಾರ ಮಳೆಯಿಂದಾಗಿ ರೈತ ಕುಟುಂಬಗಳು ನಲುಗಿಹೋಗಿವೆ. ಇದರ ಜೊತೆಗೆ ಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕರ ಕೊರತೆ, ಬೆಳೆ ಹಾನಿ ಸೇರಿದಂತೆ ಹತ್ತು ಹಲವು ಸಂಕಷ್ಟಗಳಿಂದ ಬಳಲುತ್ತಿದ್ದಾರೆ. ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ನಿರ್ಧಾರ ಕೈಕೊಂಡಿರುವುದು ಅವಾಸ್ಥವಿಕ. ಆದುದರಿಂದ ವರದಿಯನ್ನು ಈ ಕೂಡಲೇ ಹಿಂಪಡೆದು ರೈತರು ನಿರಾಂತಕವಾಗಿ ಜೀವನ ಸಾಗಿಸಿಲು ಅನುವು ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು.
ಶ್ರೀ ರಾಮಸೇನೆ ಸಂಘಟನೆಗೆ ಬೆಂಬಲ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕೊಟ್ಟಿಗೆಹಾರ ಸಂಜಯ್ ಅವರು, ಕಸ್ತೂರಿ ರಂಗನ್ ವರದಿ ಕಾನೂನಿಗೆ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಇಲ್ಲಿ ನಾವುಗಳು ಕೈಗಾರಿಕೆಗಳಿಗೆ ಭೂಮಿ ಬಿಡಿ ಎಂದು ಕೇಳುತ್ತಿಲ್ಲ. ಪ್ರಕೃತಿಗೆ ಯಾವುದೇ ತೊಂದರೆ ಕೊಡದಂತೆ ಜೀವನ ಸಾಗಿಸತ್ತಿರುವ ರೈತನ ಭೂಮಿಯನ್ನು ಕಿತ್ತುಕೊಳ್ಳುವ ಸಿದ್ಧಾಂತ ತಪ್ಪು ಎಂದು ಹೇಳುತ್ತಿದ್ದೇವೆ ಎಂದರು.