ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ…

250
firstsuddi

ಮೂಡಿಗೆರೆ: ಪ್ರಭಾವಿ ವ್ಯಕ್ತಿಯೋರ್ವರು ತಾಲ್ಲೂಕಿನ ಜಿ.ಹೊಸಹಳ್ಳಿಯಲ್ಲಿ ಅತಿಕ್ರಮಿಸಿರುವ ಗ್ರಾಮಸ್ಥರ ಕುಡಿಯುವ ನೀರಿನ ಬಾವಿಯನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.
ಜಿ.ಹೊಸಹಳ್ಳಿಯ ಸರ್ವೆ ನಂಬರ್ 27 ರಲ್ಲಿರುವ ಜಾಗವು ಸರ್ಕಾರಿ ಭೂಮಿಯಾಗಿದ್ದು, ಅದರಲ್ಲಿರುವ ಬಾವಿಯಿಂದ ಹಲವಾರು ವರ್ಷಗಳಿಂದ ಗ್ರಾಮಸ್ಥರು ಕುಡಿಯುವ ನೀರನ್ನು ಬಳಸುತ್ತಿದ್ದಾರೆ ಎಂದರು.
ಇತ್ತೀಚೆಗೆ ಆ ಜಾಗದ ಪಕ್ಕದಲ್ಲಿ ಜಮೀನು ಹೊಂದಿರುವ ವ್ಯಕ್ತಿಯೋರ್ವರು ಸರ್ಕಾರಿ ಭೂಮಿಯನ್ನು ಕಬಳಿಸುವ ಹುನ್ನಾರದಿಂದ ಬಾವಿಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ, ಇದರಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಗ್ರಾಮ ಪಂಚಾಯಿತಿ ಮತ್ತು ಮೂಡಿಗೆರೆ ತಹಸೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ದೂರಿದ ಗ್ರಾಮಸ್ಥರು ತಕ್ಷಣ ಮಧ್ಯ ಪ್ರವೇಶಿಸಿ ಅತಿಕ್ರಮಿಸಿರುವ ಬಾವಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ಹರೀಶ್, ರವಿ, ಪ್ರಕಾಶ್, ರಘು, ಲೋಹಿತ್, ಅಣ್ಣಪ್ಪ, ದೇವೇಂದ್ರ, ಸುಲೇಮಾನ್, ರಾಮಚಂದ್ರ ಹಾಜರಿದ್ದರು.