ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆ ಕನ್ನಡಿಗರ ಜವಾಬ್ದಾರಿ ಅದನ್ನು ಎಲ್ಲರೂ ಅರಿತು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು: ಶಾಸಕ ಎಂ.ಪಿ.ಕುಮಾರಸ್ವಾಮಿ…

632
firstsuddi

ಚಿಕ್ಕಮಗಳೂರು: ಕನ್ನಡಿಗರು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು, ನಾಡು ನುಡಿ, ನೆಲ, ಜಲದ ರಕ್ಷಣೆಗೆ ಕಂಕಣ ಬದ್ದರಾಗಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಕೆ.ಆರ್.ಪೇಟೆಯಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಒಂದು ತಿಂಗಳ ಕಾಲ ನಡೆಸಲಾದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಅತ್ಯಂತ ಸಮೃದ್ದವಾದ ಕನ್ನಡ ಭಾಷೆ ಇತ್ತೀಚಿನ ವರ್ಷಗಳಲ್ಲಿ ನಾಡಿನಲ್ಲಿ ಕ್ಷೀಣಿಸುತ್ತಿದೆ ಇದಕ್ಕೆ ಮೂಲಕಾರಣ ಕನ್ನಡಿಗರಲ್ಲಿರುವ ಆಲಸ್ಯ, ನಿರ್ಲಕ್ಷ್ಯ ಮತ್ತು ಅಭಿಮಾನ ಶೂನ್ಯತೆ ಎಂದ ಅವರು ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಯನ್ನು ಕನ್ನಡಿಗರೇ ಮಾಡದಿದ್ದರೆ ಅದನ್ನು ಇನ್ಯಾರು ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದರು.
ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆ ಕನ್ನಡಿಗರ ಜವಾಬ್ದಾರಿ ಅದನ್ನು ಎಲ್ಲರೂ ಅರಿತು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾರೋಪ ನುಡಿಗಳನ್ನಾಡಿದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಭಾಷೆ ಸಂಪರ್ಕದ ಸೇತುವೆ ಹಾಗಾಗಿ ಕನ್ನಡಿಗರು ವ್ಯವಹಾರಕ್ಕಾಗಿ ಎಲ್ಲಾ ಭಾಷೆಗಳನ್ನು ಕಲಿಯಬೇಕು ಆದರೆ ಮಾತೃಭಾಷೆಯಲ್ಲೇ ವ್ಯವಹರಿಸಬೇಕು, ಕನ್ನಡದ ಪುಸ್ತಕಗಳನ್ನು ಓದಬೇಕು, ಕನ್ನಡ ಕಾರ್ಯಕ್ರಮಗಳನ್ನು ನೋಡಬೇಕು ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಒಗಟು ಬಿಡಿಸುವ ಸ್ಪರ್ಧೆಯನ್ನು ನಡೆಸಿ ಕೊಟ್ಟ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕನ್ನಡ ಭಾಷೆಯ ಇಡೀ ಸಾರವಿರುವುದು ಒಗಟುಗಳಲ್ಲಿ ಹಾಗಾಗಿ ಮಕ್ಕಳು ಪ್ರತಿನಿತ್ಯ ಕನಿಷ್ಠ ಎರಡು ಒಗಟು ಮತ್ತು ಎರಡು ಗಾದೆಗಳನ್ನಾದರೂ ಕಲಿಯಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಒಂದು ತಿಂಗಳ ಕಾಲ ನಡೆಸಲಾದ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದವರಿಗೆ ಮತ್ತು ದೇಣಿಗೆ ನೀಡಿದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು, ಕೆ.ಆರ್.ಪೇಟೆ ಗ್ರಾ.ಪಂ. ಮತ್ತು ಗ್ರಾಮಸ್ಥರ ವತಿಯಿಂದ ಕುಂದೂರು ಅಶೋಕ್ ಅವರನ್ನು ಸನ್ಮಾನಿಸಲಾಯಿತು.
ಒಗಟು ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ಜಿ.ಪಂ.ಸದಸ್ಯ ಹಿರಿಗಯ್ಯ, ತಾ.ಪಂ.ಸದಸ್ಯ ಮಹೇಶ್, ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಗಣೇಶ್, ಕೆ.ಬಿ.ಅನಂತೇಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ಎಂ.ಆರ್.ಪ್ರಕಾಶ್, ವಾಜುವಳ್ಳಿ ರಮೇಶ್, ಸುಮಾ ನಾಗೇಶ್, ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಅಂಬಳೆ ಹೋಬಳಿ ಅಧ್ಯಕ್ಷ ಕಂಬಿಹಳ್ಳಿ ಕುಮಾರ್ ಸ್ವಾಗತಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ವಂದಿಸಿದರು.