ಸಾಂಕ್ರಾಮಿಕ ರೋಗಗಳಿಂದ ದೂರವಿರುವ ನಿಟ್ಟಿನಲ್ಲಿ ಹಳ್ಳಿಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ಡಾ|| ವಿನಯ್ ಕುಮಾರ್…

290
firstsuddi

ಚಿಕ್ಕಮಗಳೂರು: ಗ್ರಾಮೀಣ ಜನತೆ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಾನಸಿಕ ರೋಗತಜ್ಞ ಡಾ|| ವಿನಯ್ ಕುಮಾರ್ ಸಲಹೆ ಮಾಡಿದರು.
ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ತಾಲ್ಲೂಕಿನ ಇಂದಿರಾ ನಗರದಲ್ಲಿ (ಎನ್.ಎಂ.ಡಿ.ಸಿ) ಬುಧವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಜನತೆ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು, ಮಾನಸಿಕ ಮತ್ತು ದೈಹಿಕವಾಗಿ ಯಾವುದೇ ರೀತಿಯ ತೊಂದರೆ ಕಂಡು ಬಂದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡಬೇಕು ಎಂದರು.
ಸಾಂಕ್ರಾಮಿಕ ರೋಗಗಳಿಂದ ದೂರವಿರುವ ನಿಟ್ಟಿನಲ್ಲಿ ಹಳ್ಳಿಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಿನಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಕೈಮರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂಧಿಗಳ ತಂಡ ಪಾಲ್ಗೊಂಡು 100 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿತು.
ತಪಾಸಣೆಯ ಜೊತೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು, ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಕಾರ್ಡೋಜಾ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಎಂ.ಎ.ವಿನಯ್ ಕುಮಾರ್, ಎಸ್.ಡಿ.ಚಂದ್ರಶೇಖರ್, ಮನಶಾಸ್ತ್ರಜ್ಞ ಸತೀಶ್ ಕುಮಾರ್, ಜಯಣ್ಣ ಹಾಜರಿದ್ದರು.
ಇದಕ್ಕೂ ಮುನ್ನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಸಾಮೂಹಿಕ ಶ್ರಮದಾನದ ಮೂಲಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿದರು.