ಕರ್ನಾಟಕದಲ್ಲಿ ಎರಡನೇ “ಪ್ಲಾಸ್ಮಾ ಥೆರಪಿ” ಚಿಕಿತ್ಸೆ ಯಶಸ್ವಿ…!

174
firstsuddi

ಬೆಂಗಳೂರು : ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕಿತನ ಮೇಲೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾದ ಬೆನ್ನಲ್ಲೇ ಇಂದು ಬೆಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಪ್ಮಾಸ್ಮಾ ಥೆರಪಿಯಿಂದ ಚಿಕಿತ್ಸೆ ಪಡೆದ ಎರಡನೇ ಕೋವಿಡ್-19 ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸೋಂಕಿನಿಂದ ವಿಕ್ಟೋರಿಯ ಆಸ್ಪತ್ರೆಯ ಐಸಿಯೂಗೆ ದಾಖಲಾಗಿದ್ದ ಮಧ್ಯವಯಸ್ಕ ರೋಗಿಯೊಬ್ಬರು ಪ್ಲಾಸ್ಮಾ ಚಿಕಿತ್ಸೆಯಿಂದ ಚೇತರಿಸಿಕೊಂಡು ತೀವ್ರನಿಗಾ ಘಟಕದಿಂದ ಬಿಡುಗಡೆಯಾಗಿದ್ದಾರೆ. ಪ್ಲಾಸ್ಮಾ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಎರಡನೇ ಪ್ರಕರಣ ಇದಾಗಿದ್ದು, ಸದ್ಯ ಸಾಮಾನ್ಯ ವಾರ್ಡ್‍ನಲ್ಲಿ ಅವರನ್ನು ಇರಿಸಲಾಗಿದೆ. ಅವರ ಆರೋಗ್ಯ ಸುಧಾರಿಸುತ್ತಿದ್ದು, ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ. ಇದಕ್ಕಾಗಿ ಶ್ರಮಿಸಿದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಯ ವೈದ್ಯರ ಪ್ರಕಾರ, ಮಧ್ಯವಯಸ್ಕ ಸೋಂಕಿತ ವ್ಯಕ್ತಿಯು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಮೇ.27ರಂದು ರೋಗಿಗೆ ಪ್ಲಾಸ್ಮಾವನ್ನು ನೀಡಲಾಗಿತ್ತು. ಅಂದಿನಿಂದ ನಿರಂತರವಾಗಿ ಚಿಕಿತ್ಸೆ ಪಡೆದ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಸದ್ಯ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದು ಕೊರೊನಾ ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದರು.