ಉರಿ ಮೂತ್ರವನ್ನು ಮನೆಯ ಮದ್ದಿನಲ್ಲಿಯೇ ಹೇಗೆ ತಡೆಯಬಹುದು? ನೀವೇ ನೋಡಿ.

8357

ಉರಿ ಮೂತ್ರ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಬಹುಬೇಗ ಆವರಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆ ಉರಿಮೂತ್ರದ ಸಮಸ್ಯೆ ಕಾಣತೋಡಗುತ್ತದೆ. ಈ ಸಂದರ್ಭದಲ್ಲಿ ಮೂತ್ರ ಬರದೆ ಅಥವಾ ಸ್ವಲ್ಪ ಮೂತ್ರ ವಿಸರ್ಜನೆಗೊಂಡು ನೋವಿನ ಸೆಳೆತ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದರ ವಿಪರೀತ ಹೆಚ್ಚಾಗಿ ಮೂತ್ರದಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂ ಉಂಟು. ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ, ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು, ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು

ಉರಿ ಮೂತ್ರಕ್ಕೆ ಹಲವಾರು ಕಾರಣಗಳಿವೆ ಪ್ರಮುಖವಾಗಿ ರೋಗನಿರೋಧಕ ವ್ಯವಸ್ಥೆಯ ಮೂಲಕ ಮೂತ್ರದ ಮೂಲಕ ಹೊರದಬ್ಬಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರದ ಕ್ಷಾರದಲ್ಲಿಯೂ ಸಾಯದೇ ಮೂತ್ರನಾಳದ ಒಳಭಾಗವನ್ನು ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಈ ಸಮಸ್ಯೆ ಕಂಡುಬರುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ವೈಪರೀತ್ಯದ ಕಾರಣದಿಂದಲೂ ಸೋಂಕು ಉಂಟಾಗಬಹುದು ಹಾಗೂ ವಯೋಸಹಜವಾದ ಕ್ರಿಯೆಯಿಂದ ದೇಹ ಕೊಂಚ ದುರ್ಬಲವಾಗುವುದು ಸಹಾ ಉರಿಮೂತ್ರಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಮಹಿಳೆಯರು  ಸಂಕೋಚದ ಕಾರಣ ಬಹುಕಾಲ ಮೂತ್ರ ವಿಸರ್ಜನೆ ಮಾಡದೇ ಇರುವುದು. ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಗಿದ್ದಾಗ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಸಕಾಲದಲ್ಲಿ ನಿಸರ್ಗದ ಕರೆಗೆ ಓಗೊಡದೇ ಸೂಕ್ತ ಅವಕಾಶ ಬರುವವರೆಗೆ ಕಾಯುತ್ತಾರೆ. ಪರಿಣಾಮವಾಗಿ ಮೂತ್ರಾಶಯದಲ್ಲಿ ಶೇಖರವಾದ ದ್ರವ ಹೆಚ್ಚು ಹೆಚ್ಚು ಕ್ಷಾರೀಯವಾಗಿ ಸೋಂಕು ತಗಲಲು ಪರೋಕ್ಷ ಕಾರಣವಾಗುತ್ತದೆ .ನೀರನ್ನೂ ಕುಡಿಯದೇ ಇರುವುದೂ ಉರಿ ಮೂತ್ರಕ್ಕೆ ಒಂದು ಪ್ರಮುಖ ಕಾರಣವಾಗಿರುತ್ತದೆ.

ಆಸ್ಪತ್ರೆಗೆ ಹೋಗುವ ಮುಂಚೆ ಮೂತ್ರದ ಸೋಂಕಿಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಚಿಕಿತ್ಸೆಯೆಂದರೆ.

  • ಜಂಕ್ ಫುಡ್ ಸೇವನೆ ಬಿಟ್ಟು ನೀರು, ಕಿತ್ತಲೆ ಹಣ್ಣು, ಕಲ್ಲಂಗಡಿ, ಸೌತೇಕಾಯಿ, ಕಬ್ಬು, ಮುಂತಾದ ನೀರಿನ ಅಂಶವಿರುವ ಹಣ್ಣುಗಳ ಸೇವನೆಯಿಂದ ಕಡಿಮೆಯಾಗುತ್ತದೆ.
  • ಕಬ್ಬಿನಹಾಲು,ಎಳನೀರು, ಹಸಿಶುಂಠಿ,ನಿಂಬೆರಸ ಒಟ್ಟಿಗೆ ಸೇರಿಸಿ ಕುಡಿರುವುದರಿಂದ ಮೂತ್ರ ನಿವಾರಣೆಯಾಗುತ್ತದೆ
  • ಜೀರಿಗೆ ಕಷಾಯ ಮಾಡಿ ಕುಡಿಯುವುದರ ಮೂಲಕ ಉರಿಮೂತ್ರವನ್ನು ನಿವಾರಣೆ ಮಾಡಬಹುದು.
  • ನೀರಿಗೆ ನಿಂಬೆ ರಸ ಮತ್ತು ಉಪ್ಪು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ನಿವಾರಣೆಯಾಗುತ್ತದೆ.
  • ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಡಿವಾಣವನ್ನು ಹಾಕಲು ಮೊಸರು ಅತ್ಯುತ್ತಮವಾಗಿದ್ದು ಮೊಸರು ಸೇವನೆಯಿಂದ ಉರಿಮೂತ್ರ ನಿವಾರಣೆಯಾಗುತ್ತದೆ.
  • ಸೋಂಪಿನ ಕಾಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಮೂತ್ರ ವಿಸರ್ಜನೆ ಸಲೀಸಾಗುತ್ತದೆ
  • ಹುರುಳಿಕಾಳನ್ನು ಈ ಸಂದರ್ಭದಲ್ಲಿ ಹೆಚ್ಚಾಗಿ ಬಳಸುವುದರಿಂದ ಉರಿ ಮೂತ್ರವನ್ನು ಕಡಿಮೆಗೊಳಿಸಬಹುದು.
  • ಸೋರೆಕಾಯಿಯ ರಸಕ್ಕೆ ನಿಂಬೆರಸ ಹಾಕಿ ಕುಡಿಯುವುದರಿಂದ ಉರಿಮೂತ್ರ ಕಡಿಮೆಯಾಗುತ್ತದೆ
  • ಬಾರ್ಲಿಯನ್ನು ನೆನೆಸಿ ನಂತರ ಗಂಜಿ ಮಾಡಿ ಕುಡಿಯುವುದರಿಂದ ಸೋಂಕು ಕಡಿಮೆಯಾಗುತ್ತದೆ
  • ಕುದಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಮೂತ್ರ ವಿಸರ್ಜನೆ ಸರಿಗೊಳಿಸಬಹುದು.
  • ಕುಚ್ಚಲು ಅಕ್ಕಿ ಗಂಜಿ ನೀರನ್ನು ಕುಡಿಯುವುದರ ಮೂಲಕ ಉರಿ ಮೂತ್ರ ಕಡಿಮೆಯಾಗುತ್ತದೆ
  • ಧನಿಯ ಕಾಳಿನ್ನು ನೆನೆಸಿ ಅದರ ನೀರು ಸೇವಿಸುವುದರ ಮೂಲಕ ಉರಿ ಮೂತ್ರವನ್ನು ನಿಯಂತ್ರಿಸಬಹುದು
  • ಮೆಂತ್ಯಕಾಳಿನ ಕಷಾಯ ಮಾಡಿ ಕುಡಿಯುವುದರಿಂದ ಉರಿ ಮೂತ್ರ ನಿವಾರಣೆಯಾಗುತ್ತದೆ.