ಬೆಂಗಳೂರು : ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ಕಾರಣ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮನೆಯೊಂದು ಎರಡು ಬಾಗಿಲು ಆಗಿದೆ. ಆರ್.ಆರ್. ನಗರ ಉಪ ಚುನಾವಣೆಯಲ್ಲಿ ನಮಗೆ ಲೀಡ್ ಬರಲು ಸಿದ್ದರಾಮಯ್ಯನವರೇ ಕಾರಣ. ಆರ್.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಬೇಕೆಂದು ಸಿದ್ದರಾಮಯ್ಯ ಅವರು ಯೋಜನೆ ರೂಪಿಸಿದ್ದರು. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ಲಾನ್ ಮಾಡಿದ್ದರು.
ಬೆಂಗಳೂರಿಗೆ ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಒಂದು ಕಪ್ಪು ಚುಕ್ಕೆ. ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಕೊಲೆ ಮಾಡಲು ಹೋದವರು ಮನೆಗೆ ಬೆಂಕಿ ಹಾಕಿದ್ದರು. ಸಿದ್ದರಾಮಯ್ಯ ಅವರ ಬಣದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರು ಇದ್ದಾರೆ. ಡಿ. ಕೆ. ಶಿವಕುಮಾರ್ ಅವರ ಬಣದಲ್ಲಿ ಸಂಪತ್ ರಾಜ್ ಅವರು ಇದ್ದಾರೆ. ಇದರಿಂದಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ರಕ್ಷಣೆ ನೀಡುತ್ತಿಲ್ಲ. ಅಖಂಡ ಶ್ರೀನಿವಾಸ್ ಅವರಿಗೆ ಸರ್ಕಾರದಿಂದ ಎಲ್ಲಾ ಸಹಕಾರ ಸಿಗಲಿದೆ ಎಂದರು.










