ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಶಾಸಕ ಜಗದೀಶ್ ಶೆಟ್ಟರ್ ಅವರು ಸಿ.ಎಸ್ ಶಿವಳ್ಳಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಪಕ್ಷ ಭಿನ್ನವಾಗಿದ್ದರೂ ವಯಕ್ತಿಕವಾಗಿ ತುಂಬಾ ಆತ್ಮೀಯರಾಗಿದ್ದರು, ಸ್ನೇಹ ಜೀವಿಯಾಗಿದ್ದ, ಸಚಿವರಾದ ಶ್ರೀ ಸಿ.ಎಸ್. ಶಿವಳ್ಳಿಯವರ ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಶಿವಳ್ಳಿಯವರ ಕುಟುಂಬ ಸದಸ್ಯರು ಹಾಗೂ ಅವರ ಬೆಂಬಲಿಗರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಚಿವ ಸಿ.ಎಸ್ ಶಿವಳ್ಳಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಸಂತಾಪ ಸೂಚಿಸಿದ್ದು, ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿಯವರ ನಿಧನ ನನಗೆ ಅತೀವ ಆಘಾತವನ್ನುಂಟು ಮಾಡಿದೆ. ಹುಷಾರಿದ್ದ ಕೊನೆ ಕ್ಷಣದವರೆಗೂ ಧಾರವಾಡ ಕಟ್ಟಡ ಕುಸಿತದ ತೆರವು ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ರಾಜ್ಯ ಹಾಗೂ ಪಕ್ಷ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಭಗವಂತ ಶಿವಳ್ಳಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಿ.ಎಸ್ ಶಿವಳ್ಳಿ ಅವರ ನಿಧನಕ್ಕೆ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಸಂತಾಪ ಸೂಚಿಸಿದ್ದು, ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ಅನಿರೀಕ್ಷಿತ ಅಗಲಿಕೆ ತೀವ್ರ ಆಘಾತ ಉಂಟು ಮಾಡಿದೆ. ಅವರ ಕುಟುಂಬದ ಸದಸ್ಯರಿಗೆ ಹಾಗೂ ಬಂಧು ಮಿತ್ರರಿಗೆ ಅವರ ಅಕಾಲಿಕ ಸಾವಿನ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.










