ಮೂಡಿಗೆರೆ : ಪ್ರಾಣಿಸಂಕುಲಗಳು, ಮಾನವರು, ನೀರನ್ನೇ ಆಶ್ರಯಿಸಿರುವ ಜೀವ ಜಲಚರಗಳು ಬದುಕಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ನೀರಿನ ಆಸರೆ. ಆ ನೀರಿಗೆ ಮಲೆನಾಡಿನಲ್ಲಿ ಈಗ ಭರದ ಛಾಯೆ ಉಂಟಾಗಿದೆ ಎಂದು ಮಾಜಿ ಕಾಫಿ ಬೆಳೆಗಾರರ ಅಧ್ಯಕ್ಷ ಬಸವರಾಜ್ ಆತಂಕ ವ್ಯಕ್ತ ಪಡಿಸಿದರು.
ಅವರು ಚಿಕ್ಕಮಗಳೂರು ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಸ್ವಯಂಚಾಲಿತ ವಿಭಾಗ ಮತ್ತು ಎನ್‍ಸಿಸಿ ಘಟಕ,ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್, ವಾರ್ತಾ ಇಲಾಖೆ ಹಾಗೂ ವಕೀಲರ ಸಂಘ ಮತ್ತು ಬಣಕಲ್ ಜೆಸಿಐ ವಿಸ್ಮಯ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ವಿಶ್ವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜೀವ ರಕ್ಷಣೆಗಾಗಿ ನೀರು ಸಂರಕ್ಷಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.ಅಂತರ್ಜಲವನ್ನು ಕುಗ್ಗಿಸುವ ಕೆಲಸಗಳು ಮಾನವನ ಕ್ರೌರ್ಯದಿಂದ ಸಾಗುತ್ತಿವೆ.ನಾವು ಜ್ಞಾನವಂತರಾಗಿ ನೀರನ್ನು ಮಿತವಾಗಿ ಬಳಸದೇ ಹೋದರೆ ಮುಂದೆ ಜೀವಕ್ಕೆ ಕಂಟಕ ಬರುವ ದಿನಗಳು ಬಹಳ ದೂರವಿಲ್ಲ.ಕೃಷಿ ಮಾಡುವ ರೈತರು ದೂರವಾಗುತ್ತಿದ್ದು,ಎಲ್ಲಿಯೂ ಕೃಷಿ ಹೊಂಡಗಳು ಕಾಣ ಸಿಗುತ್ತಿಲ್ಲ. ಭರ ಬಿಸಿಲಿನಿಂದ ಹೇಮಾವತಿ ಒಡಲು, ಅನೇಕ ಕೆರೆಗಳು ನೀರಿಲ್ಲದೇ ಜೀವ ಕಳೆದುಕೊಳ್ಳುತ್ತಿವೆ. ನೀರು ಉಳಿಸಬೇಕಾದರೆ ನಮ್ಮ ಸ್ವಾರ್ಥತೆಯ ಬದುಕು ನಿಲ್ಲಿಸಬೇಕು ಎಂದರು.
ಪರಿಸರ ತಜ್ಞ ಹಾಗೂ ಚಲನಚಿತ್ರ ನಿರ್ದೇಶಕರಾದ ಕೇಸರಿ ಹರವು ಮಾತನಾಡಿ ಜಲಸಂಪತ್ತು ಉಳಿಸಬೇಕಾದರೆ ಸ್ಥಳೀಯರು ಮನಸ್ಸು ಮಾಡಬೇಕು. ಹೇಮಾವತಿ ನದಿ ಅಂತರ್ಜಲ ಕುಸಿದಿದೆ ಎಂದರೆ ಅದಕ್ಕೆ ಕಾರಣಕರ್ತರು ನಾವೇ ಆಗಿದ್ದೇವೆ. ಬರೀ ಮಾತಿನಿಂದ ಜಲ ಉಳಿಸಲು ಸಾದ್ಯವಿಲ್ಲ. ಅಂತರ್ಜಲ ಕುಸಿಯದಂತೆ ನಾವು ನದಿಯಿಂದ ಬೆಳೆಗಳಿಗೆ ನೀರು ಹಾಯಿಸಲು ಯಾಂತ್ರಿಕತೆ ಬಳಕೆ ಕಡಿಮೆ ಮಾಡಬೇಕು. ಜಲ ಸಂರಕ್ಷಣೆ ಮಾಡಿ ಕೃಷಿ ಹೊಂಡಗಳನ್ನು ತೆಗೆದು ನೀರು ಉಳಿಸಲು ಪ್ರಯತ್ನಿಸಬೇಕು. ಕಾಡು ಉಳಿಸುವ ಕೆಲಸ ನಮ್ಮಿಂದ ಸಾಧ್ಯವಾದರೆ ನೀರಿನ ಭರಗಾಲ ತಡೆಗಟ್ಟಲು ಸಾಧ್ಯವಿದೆ ಎಂದರು.
ಹಿರಿಯರಾದ ಹೊರಟ್ಟಿ ರಘು ಮಾತನಾಡಿ ವಿದ್ಯಾರ್ಥಿಗಳು ಕನ್ನಡದಲ್ಲಿ ನೀರು ಉಳಿಸಿ ಅಭಿಯಾನವನ್ನು ಬೈಕ್ ಜಾಥಾ ಮೂಲಕ ಜನಜಾಗೃತಿ ಮೂಡಿಸಿರುವುದು ಶ್ಲಾಘನೀಯ ಸಂಗತಿಯಾಗಿದ್ದು, ಜೀವ ಸಂಕುಲ ಉಳಿಯಬೇಕಾದರೆ ನೀರು ಅವಶ್ಯಕವಾಗಿದೆ. ಹೇಮಾವತಿ ನದಿಯ ಅಂತರ್ಜಲ ಕುಸಿದು ಪ್ರತಿಯೊಬ್ಬರಿಗೂ ಆತಂಕ ಸೃಷ್ಟಿಯಾಗಿದೆ. ಮೂಡಿಗೆರೆ ತಾಲೂಕಿನಾಧ್ಯಂತ ಹಲವು ಸರ್ಕಾರಿ ಕೆರೆಗಳಿದ್ದು ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ ಎಂದರು.
ಮೂಡಿಗೆರೆ ಕಸಾಪದ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಪ್ರಸಾಧ್ ರಕ್ಷಿಧಿ ಮಾತನಾಡಿದರು. ಚಿಕ್ಕಮಗಳೂರಿನ ಸರ್ಕಾರಿ ಪಾಲಿಟೆಕ್ನಿಕ್‍ನ ವಿದ್ಯಾರ್ಥಿಗಳು ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದವರೆಗೂ ನೀರಿನ ಸಂರಕ್ಷಣೆಗಾಗಿ ಬೈಕ್ ಜಾಥಾ ನಡೆಸಿದರು. ಬಣಕಲ್‍ನ ಕೂಡಹಳ್ಳಿಯ ಹೇಮಾವತಿ ನದಿಗೆ ನಡಿಗೆ ಮೂಲಕ ಸಾಗಿ ನೀರಿನ ಅಂತರ್ಜಲ ಉಳಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರತಿಷ್ಠಾನದ ಸದಸ್ಯ ರಾಘವೇಂದ್ರ, ಮಂಜುನಾಥ್, ಸರ್ಕಾರಿ ಪಾಲಿಟೆಕ್ನಿಕ್‍ನ ವಿಭಾಗದ ಮುಖ್ಯಸ್ಥ ಐವನ್‍ಡಿಸಿಲ್ವ, ಬಾಪುದಿನೇಶ್, ವರುಣ್, ಜೆಸಿಐ ವಿಸ್ಮಯದ ಅಧ್ಯಕ್ಷ ಎನ್.ಟಿ.ದಿನೇಶ್, ಟಿ.ಎಂ.ಗಜೇಂದ್ರ, ಕವೀಶ್, ಹರ್ಷವರ್ಧನ್, ರವಿಶಂಕರ್, ಸತೀಶ್‍ತರುವೆ, ಶಿವಾನಂದ್, ನರಸಿಂಹಮೂರ್ತಿ ಹಾಗೂ ಚಿಕ್ಕಮಗಳೂರು ಸರ್ಕಾರಿ ಪಾಲಿಟೆಕ್ನಿಕ್‍ನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀರು ಉಳಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು.










