ಅಂತ್ಯಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು : ಸರ್ಕಾರಕ್ಕೆ ಹೆಚ್‍ಡಿಕೆ ಮನವಿ…

158
firstsuddi

ಬೆಂಗಳೂರು : ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್ ಹಾಗೂ ಲಭ್ಯವಿರುವ ಉಪಶಮನದ ಔಷಧಿಗಳನ್ನು ಸರ್ಕಾರ ಕೊಡಲಿಲ್ಲ. ಕನಿಷ್ಠ ಪಕ್ಷ ಕೊರೊನಾ ಸೋಂಕಿತರ ಶವಗಳ ಅಂತ್ಯಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ.

ಸರಿಯಾದ ಚಿಕಿತ್ಸೆ ದೊರಕದೇ ಅತ್ಯಂತ ಅಮಾನವೀಯವಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯನ್ನು ಮಾಡುವಲ್ಲಿ ಕೈ ಚೆಲ್ಲಿ ಕುಳಿತಿರುವ ರಾಜ್ಯ ಸರ್ಕಾರದ ವೈಫಲ್ಯ ಅತ್ಯಂತ ಬೇಜವಾಬ್ದಾರಿತನದ ನಿರ್ದಯಿ ವರ್ತನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ಹೊರಹಾಕಿದ್ದಾರೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ಮುಗ್ಗರಿಸಿ ಬಿದ್ದ ಸರ್ಕಾರ ಅಂತ್ಯ ಸಂಸ್ಕಾರಕ್ಕಾದರೂ ಜಾಗದ ವ್ಯವಸ್ಥೆ ಮಾಡುವಲ್ಲಿ ಇನ್ನೂ ತಡ ಮಾಡದೆ ಕೈ ಕಟ್ಟಿ ಕೂರಬಾರದು. ಇಲ್ಲದಿದ್ದರೆ ಜನರ ಹಿಡಿಶಾಪ ಸರ್ಕಾರಕ್ಕೆ ತಗಲುವುದರಲ್ಲಿ ಸಂಶಯವೇ ಬೇಡ. ಸಾವನ್ನಪ್ಪಿರುವ ಕೊರೊನಾ ಸೋಂಕಿತರ ಕುಟುಂಬದವರು ಪಡುತ್ತಿರುವ ಬವಣೆಯನ್ನು ಕಂಡರೆ ಹೃದಯ ಕಿವುಚಿದಂತಾಗುತ್ತದೆ. ಬೆಂಗಳೂರಿನ ಎಂಟೂ ದಿಕ್ಕುಗಳಲ್ಲೂ ಮರಗಳಿಲ್ಲದ ಬೆಂಗಾಡು ಅರಣ್ಯ ಭೂಮಿಯಿದೆ. ಇಲ್ಲಿ ಪ್ರತಿದಿನ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಸರ್ಕಾರ ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸಲಹೆ ಮಾಡಿದ್ದಾರೆ.