ಅತ್ಯಾಚಾರಗೈದು ಜೈಲು ಸೇರಿದ್ದವನಿಂದ ಅದೇ ಯುವತಿ ಮೇಲೆ ಮತ್ತೆ ಅತ್ಯಾಚಾರ!

70
firstsuddi

ಭೋಪಾಲ್ : 2020ರ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿ ಯುವತಿಗೆ ಚಾಕು ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಜಬಲ್ ಪುರ ಜಿಲ್ಲೆಯಲ್ಲಿ ನಡೆದಿದೆ.

ಈಗ ಈ ಹುಡುಗಿಗೆ 19 ವರ್ಷ ವಯಸ್ಸು, ಎರಡು ವರ್ಷಗಳ ಹಿಂದೆ ಅಪ್ರಾಪ್ತಳಾಗಿದ್ದಾಗ ಇದೇ ಆರೋಪಿ ಅತ್ಯಾಚಾರವೆಸಗಿದ್ದನು. ಆರೋಪಿಯನ್ನು ವಿವೇಕ್ ಪಟೇಲ್ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಈ ಕೃತ್ಯ ವೆಸಗಿದ್ದಾನೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು 2020ರಲ್ಲಿ ಬಂಧಿಸಲಾಗಿತ್ತು. ಆದರೆ ಒಂದು ವರ್ಷಗಳ ನಂತರ 2021ರಲ್ಲಿ ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿದ್ದನು ಎಂದು ಪೊಲೀಸ್ ಅಧಿಕಾರಿ ಆಸಿಫ್ ಇಕ್ಬಾಲ್ ತಿಳಿಸಿದ್ದಾರೆ.

ಘಟನೆ ಸಂಬಂಧ ದೂರು ನೀಡಿರುವ ಯುವತಿ ಆರೋಪಿಯು ಒಂದು ತಿಂಗಳ ಹಿಂದೆ ತನ್ನ ಸ್ನೇಹಿತನೊಂದಿಗೆ ತನ್ನ ಮನೆಗೆ ಬಲವಂತವಾಗಿ ನುಗ್ಗಿ ತನಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆರೋಪಿ ಮತ್ತು ಆತನ ಸ್ನೇಹಿತ ಈ ಕೃತ್ಯದ ವೀಡಿಯೋ ಸೆರೆಹಿಡಿದಿದ್ದು, ತಾನು ನೀಡಿರುವ ದೂರನ್ನು ಹಿಂಪಡೆಯದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಬಗ್ಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.