ಬೆಂಗಳೂರು : ನಟ ದಿ. ಪುನೀತ್ ರಾಜ್ಕುಮಾರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದ ಗಂಧದಗುಡಿ ಹೆಸರಿನ ಡಾಕ್ಯುಮೆಂಟರಿ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು. ಆದರೆ ಅವರು ಅ.29ರಂದು ಇಹಲೋಕ ತ್ಯಜಿಸಿದರು. ಇದೀಗ ಅಪ್ಪು ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೊತ್ತುಕೊಂಡಿದ್ದಾರೆ.
ಡಾಕ್ಯುಮೆಂಟರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಪುನೀತ್, ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್ನ ಫೋಟೊವೊಂದರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯಮೆಂಟರಿ ಬಿಡುಗಡೆಯ ಸುಳಿವು ನೀಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು.
ಈಗ ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದು, “ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ” ಎಂದು ಬರೆದುಕೊಂಡಿದ್ದಾರೆ.










