ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ : ಸಿ.ಟಿ.ರವಿ

92
firstsuddi

ಚಿಕ್ಕಮಗಳೂರು: ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ, ಯಾವ ಊರಲ್ಲೂ ಜನ ಬೆಟ್ಟು ಮಾಡಿ ತೋರಿಸದ ಹಾಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಾಲೂಕಿನ ಉಂಡಾಡಿಹಳ್ಳಿಯಲ್ಲಿ ಇಂದು ಗ್ರಾಮಸ್ಥರು ಆಯೋಜಿಸಿದ್ದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಂಡಾಡಿಹಳ್ಳಿ ಗ್ರಾಮಸ್ಥರ ನನ್ನ ಸಂಬಂಧ ಇಂದು ನಿನ್ನೆಯದಲ್ಲ, ಅದು ಅವಿನಾಭಾವ ಸಂಬಂಧ. ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ನನ್ನ ಕಾಲೇಜು ದಿನಗಳಿಂದಲೂ ಬೆಸೆದ ಈ ಸಂಬಂಧ ಇನ್ನೂ ಗಟ್ಟಿಯಾಗೇ ಉಳಿದಿದೆ ಎಂದರು.

ಉಂಡಾಡಿಹಳ್ಳಿಯ ಗ್ರಾಮ ಠಾಣಾ ವಿಷಯದಲ್ಲಿ ಯಾರಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ, ಹಾಗಾಗಿ ಆ ವಿಷಯದಲ್ಲಿ ಯಾರೂ ಹೆದರಬೇಕಾಗಿಲ್ಲ. ಉಂಡಾಡಿಹಳ್ಳಿಯ ಜನ ಏನು ಕೇಳಿದರು ಆಗಲ್ಲ ಅಥವಾ ಇಲ್ಲ ಎನ್ನದೆ ಅವರು ಕೇಳಿದ್ದನ್ನೆಲ್ಲ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.

ಗ್ರಾಮದಲ್ಲಿ ಹೊಸ ಸಮುದಾಯ ಭವನದ ನಿರ್ಮಾಣಕ್ಕೆ ಈಗಾಗಲೇ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ, ಇನ್ನೂ ಐವತ್ತು ಲಕ್ಷ ಬೇಕಾದರೂ ಕೊಡುತ್ತೇನೆ. ಜನ ಮೆಚ್ಚುವಂತೆ ಸುಸಜ್ಜಿತವಾಗಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ತಮ್ಮ 5 ವರ್ಷದ ಅವಧಿಯಲ್ಲಿ ಬೀಕನಹಳ್ಳಿ ಗ್ರಾಮ ಪಂಚಾಯಿತಿ ಒಂದಕ್ಕೇ 24 ಕೋಟಿ 98 ಲಕ್ಷ ರೂ.ಅನುದಾನವನ್ನು ನೀಡಿದ್ದೇನೆ ಎಂದು ತಿಳಿಸಿದರು.

ಹಿಂಡಿಯನ್ನು ದುಡಿಯುವ ಎತ್ತಿಗೆ ಜಾಸ್ತಿ ಹಾಕಬೇಕು .ಕಳ್ಳ ಎತ್ತಿಗೆ ಹಾಕಿದರೆ ಉಪಯೋಗವಿಲ್ಲ. ದುಡಿಯುವ ಎತ್ತಿಗೆ ಹಾಕಿದರೆ ಅದು ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತದೆ.ಅದೇರೀತಿ ಕೆಲಸ ಮಾಡುವವರಿಗೆ ಓಟು ಹಾಕಬೇಕು ಎಂದು ಕಿವಿ ಮಾತು ಹೇಳಿದರು.

ಬಾಚಿಕೊಂಡು ತಿನ್ನುವವರಿಗೆ ಮತಕೊಟ್ಟರೆ, ಊರಿಗೆ ಕೆಟ್ಟ ಹೆಸರು ಬರುತ್ತದೆ. ನಾನು ಕಳ್ಳೆತ್ತೋ ಅಥವಾ ದುಡಿಯುವ ಎತ್ತೋ ಎಂದು ನೀವು ತುಂಬಾ ವರ್ಷ ದಿಂದ ನೋಡಿದ್ದೀರಿ ಹಾಗಾಗಿ ಮತ್ತೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಯಬಸವ ತಪೋವನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ, ನವ ಚಿಕ್ಕಮಗಳೂರಿನ ನಿರ್ಮಾತೃ ಸಿ.ಟಿ.ರವಿ ಎಂದರೆ ತಪ್ಪಾಗಲಾರದು, ಅವರು ಮತ್ತೆ ಆಯ್ಕೆಯಾಗಬೇಕು ಎಂದು ಸಲಹೆ ಮಾಡಿದರು.

ಉಂಡಾಡಿಹಳ್ಳಿಯಿಂದ ತಮ್ಮ ಮಠಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಶಾಸಕರಿಗೆ ಧನ್ಯವಾದ ಅರ್ಪಿಸಿದರು.

ಜಿ.ಪಂ. ಮಾಜಿಉಪಾಧ್ಯಕ್ಷ ಸೋಮಶೇಖರ್, ಸಿಡಿಎ ಮಾಜಿ ಅಧ್ಯಕ್ಷ ರಂಗನಾಥ್,ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾಗೀರತಿಜಯಣ್ಣ, ನಾಗರಾಜ್, ಗ್ರಾಮದ ಗೌಡರಾದ ತಿಮ್ಮೇಗೌಡ, ಗೌರೇಗೌಡ ಉಪಸ್ಥಿತರಿದ್ದರು. ಸಮಾರಂಭದ ನಂತರ ಶ್ರೀಅಗ್ನಿಬನ್ನಿರಾಯ ಸ್ವಾಮಿಯ ಉತ್ಸವ ಗ್ರಾಮದಲ್ಲಿ ನಡೆಯಿತು.