ಶ್ರೀನಗರ : ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಾಜೌರಿ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಇಂಟರ್ ನೆಟ್ ಸೇವೆ ಸ್ಥಗಿತ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಾವೇಶ ಕೂಡಾ ಆಯೋಜಿಸಲಾಗಿದೆ. ಈ ಹೊತ್ತಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆ ಕೂಡಾ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು, ಸಮಾಜವಿರೋಧಿ ಶಕ್ತಿಗಳು ಇಂಟರ್ನೆಟ್ ಬಳಸಿಕೊಳ್ಳುವ ಸಾಧ್ಯತೆಗಳ ಕಾರಣದಿಂದ ಇಂಟರ್ ನೆಟ್ ಸ್ಥಗಿತ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
1992ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದ 57 ವರ್ಷ ವಯಸ್ಸಿನ ಹೇಮಂತ್ ಲೋಹಿಯಾ ಅವರ ದೇಹದ ಮೇಲೆ ಸುಟ್ಟ ಗಾಯದ ಗುರುತುಗಳೂ ಇವೆ. ಈ ಹತ್ಯೆಯನ್ನು ತಾವೇ ಮಾಡಿರೋದಾಗಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಭಾರತೀಯ ಘಟಕ ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫೋರ್ಸ್ ಹೊಣೆ ಹೊತ್ತುಕೊಂಡಿದೆ. ಅಮಿತ್ ಶಾ ಕಣಿವೆ ರಾಜ್ಯ ಭೇಟಿ ದಿನವೇ ಈ ಕೃತ್ಯ ನಡೆದಿರೋದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.










