ನವದೆಹಲಿ: ಆಂಧ್ರ ಪ್ರದೇಶದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರು ಇಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
2010 ರಲ್ಲಿ ಕಿರಣ್ ಕುಮಾರ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಕಾಂಗ್ರೆಸ್ ತೊರೆದ ಕೆಲವು ವಾರಗಳ ನಂತರ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ಸೃಷ್ಟಿಸುವ ಅಂದಿನ ಯುಪಿಎ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಿರಣ್ ಕುಮಾರ್ 2014 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ‘ಜೈ ಸಮೈಕ್ಯಂಧ್ರ’ ಎಂಬ ಸ್ವಂತ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. 2018 ರಲ್ಲಿ ಯಾವುದೇ ಚುನಾವಣಾ ಲಾಭವಿಲ್ಲದೆ, ಮಾಜಿ ಸಿಎಂ ಕಿರಣ್ ಕುಮಾರ್ ಮತ್ತೆ ಕಾಂಗ್ರೆಸ್ ಸೇರುವ ಮೊದಲು ದೀರ್ಘಕಾಲ ರಾಜಕೀಯದಿಂದ ದೂರವಿದ್ದರು.
ಬಿಜೆಪಿ ಸೇರ್ಪಡೆ ಹಿನ್ನಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಣ್ ಕುಮಾರ್ ರೆಡ್ಡಿ , ‘ಕಾಂಗ್ರೆಸ್ ಬಿಡುತ್ತೇನೆ ಅಂತಾ ಎಂದಿಗೂ ಊಹಿಸಿಕೊಂಡಿರಲಿಲ್ಲ. ಆದರೆ, ಅಲ್ಲಿ ಸಂವಾದದ ಕೊರತೆಯಿದೆ. ಯಾರ ಸಲಹೆಗಳನ್ನು ತೆಗೆದುಕೊಳ್ಳಲ್ಲ, ಬಿಜೆಪಿಗೆ ಸಮಾಜದ ಪ್ರತಿಯೊಂದು ವರ್ಗದ ಬಗ್ಗೆ ಸ್ಪಷ್ಟ ದೂರದೃಷ್ಟಿಯಿದೆ. ಆ ಪಕ್ಷದಲ್ಲಿನ ಯಶಸ್ಸಿನ ಹಸಿವು ನನಗೆ ಸ್ಪೂರ್ತಿಯಾಗಿದೆ’ ಎಂದರು.










