ಬೆಂಗಳೂರು : ಅಜಾನ್ ವಿರುದ್ಧ ಅಭಿಯಾನ ಆರಂಭಿಸಿರುವ ಹಿಂದೂ ಸಂಘಟನೆಗಳು ಇಂದು ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸಿ ರಾಮಜಪ, ಹನುಮಾನ್ ಚಾಲೀಸಾ, ಸುಪ್ರಭಾತ ಮೊಳಗಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳ ದೇವಸ್ಥಾನಗಳಲ್ಲಿ ಇಂದು ಆಜಾನ್ ಮೊಳಗುವ ವೇಳೆಗೆ ಸುಪ್ರಭಾತ ಮೊಳಗಿದೆ.
ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ, ಸಂಗಮೇಶ್ವರ ದೇವಾಲಯದಲ್ಲಿ ಇಂದಿನಿಂದ ಮೈಕ್ ಮೂಲಕ ದೇವರ ಜಪ ಮಾಡುವುದಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಮತ್ತು ಪ್ರಧಾನ ಕಾರ್ಯದರ್ಶಿ ಹೇಮಂತ್ ಬೇಲೂರು ಬೆಳಗ್ಗೆ ಐದು ಗಂಟೆಗೆ ಮೈಕ್ ಮೂಲಕ ರಾಮಜಪ, ಶಿವನಜಪ ಆರಂಭಿಸಿದರು.
ಮೈಸೂರಿನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್, ಶ್ರೀರಾಮ ಭಜನೆ ಮೂಲಕ ಸುಪ್ರಭಾತಕ್ಕೆ ಚಾಲನೆ ನೀಡಲಾಯಿತು. ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಯಿಂದ ಆರು ಗಂಟೆಯವರೆಗೂ ಭಕ್ತಿಗೀತೆ, ಸುಪ್ರಭಾತ ಹಾಕಲಾಗಿತ್ತು.
ನೀಲಸಂದ್ರದ ಆಂಜನೇಯ ದೇಗುಲದ ಮೈಕ್ ನಲ್ಲಿ ಓಂಕಾರ ನಾದ ಹನುಮಾನ್ ಚಾಲೀಸ್ ಹಾಕಲು ಶ್ರೀರಾಮ ಸೇನೆ ಸಜ್ಜುಗೊಂಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರ ಕ್ರಮದ ವಿರುದ್ಧ ಹಿಂದೂ ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದರು.










