ಆಮ್ ಆದ್ಮಿ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ಸೇರ್ಪಡೆ…

66
firstsuddi

ಬೆಂಗಳೂರು : ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಮುಖಂಡ ಹಾಗೂ ನಟ ಮುಖ್ಯಮಂತ್ರಿ ಚಂದ್ರು ಇದೀಗ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನಗರದಲ್ಲಿಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ರಾವ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯ ಸಿಗುತ್ತೆ ಅಂದಿಕೊಂಡಿದ್ದೆ. ವಾಜಪೇಯಿ ಆಡಳಿತ ನೋಡಿ ಬಿಜೆಪಿಯಲ್ಲೂ ಕೆಲಸ ಮಾಡಿದ್ದೆ. ಆದರೆ, ರಾಜಕೀಯ ದಂಧೆಯಾಗಿದೆ. ರಾಜಕಾರಣವೇ ಬೇಡ ಅಂತ ನಿರ್ಧರಿಸಿದ್ದೆ. ಆದರೆ ಆಪ್ ಅವರು ನನ್ನನ್ನು ಕರೆದ್ರು. ಕೇಜ್ರಿವಾಲ್ ಅವರಿಂದ ಆದ ಬದಲಾವಣೆ ನೋಡಿದ್ದೇನೆ. ಪರ್ಯಾಯ ವ್ಯವಸ್ಥೆ ನೋಡಿ ಇಲ್ಲಿಗೆ ಬಂದಿದ್ದೇನೆ ಎಂದರು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಪ್ರಾಮಾಣಿಕರು ಅಸ್ಪೃಶ್ಯರಾಗಿದ್ದಾರೆ. ಮೂರು ಪಕ್ಷಗಳಿಂದ ರಾಜ್ಯದ ಜನತೆಗೆ ದ್ರೋಹವಾಗಿದೆ. ಮುಂದೆಯೂ ದ್ರೋಹ ಮಾಡಲು ಹವಣಿಕೆ ಮಾಡುತ್ತಿವೆ. ಎಲ್ಲ 224 ಸ್ಥಾನಗಳನ್ನು ಗೆಲ್ಲುವುದು ಆಮ್ ಆದ್ಮಿ ಪಾರ್ಟಿಯ ಗುರಿ. ನಾವು ಪೊರಕೆ ಹಿಡಿದು ಮೂರೂ ಪಕ್ಷಗಳನ್ನು ಗುಡಿಸಬೇಕು ಅಂದು ಕೊಂಡಿದ್ದೇವೆ. ಪೊರಕೆಯಲ್ಲಿ ಬಡಿಯಲು ಸಿದ್ಧರಿದ್ದೇವೆ, ಶಿಕ್ಷೆ ಕೊಡಲು ಸಿದ್ಧರಿದ್ದೇವೆ. ಬೇರೆ ಪಕ್ಷಗಳಲ್ಲಿ ಮೂಲೆಗುಂಪಾಗಿರುವ ಸಹೃದಯಿ ಹಾಗೂ ಪ್ರಾಮಾಣಿಕ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೇರಬೇಕು ಎಂದು ಕರೆ ನೀಡಿದರು.