ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು, ಪ್ರತಿಯೊಂದು ಜೀವವೂ ಮುಖ್ಯ. ಇಂತಹ ಸಂದರ್ಭದಲ್ಲಿ ನನ್ನ ಮೇಲೆ ಬಂದ ಆರೋಪದಿಂದ ವೈಯಕ್ತಿಕವಾಗಿ ತುಂಬಾ ನೊಂದಿದ್ದೇನೆ. ನನ್ನ 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ. ತನಿಖಾಧಿಕಾರಿಗಳಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ತನಿಖಾ ವರದಿ ಬರುವ ಮುನ್ನವೇ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ನಮಗೂ ಲಿಕ್ವಿಡ್ ಆಕ್ಸಿಜನ್ ಬಳ್ಳಾರಿಯಿಂದ ಬರುತ್ತೆ. ಇಲ್ಲಿ ಏನಾದ್ರೂ ಆದ್ರೆ ಬಳ್ಳಾರಿಯವರ ಮೇಲೆ ಆರೋಪ ಮಾಡೋಕೆ ಆಗುತ್ತಾ? ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ಘಟನೆಯ ರಾತ್ರಿ 40 ಸಿಲಿಂಡರ್ ಆಕ್ಸಿಜನ್ ಕಳುಹಿಸಲಾಗಿದೆ. ಒಟ್ಟಾಗಿ 250 ಸಿಲಿಂಡರ್ ಕಳುಹಿಸಲಾಗಿದೆ. ಆಕ್ಸಿಜನ್ ಸರಬರಾಜು ಏಜೆನ್ಸಿ ಅವರು ಕೆಲಸ ಮಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೇವು. ಅವರು ಆ ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ ಎಂದು ರೋಹಿಣಿ ಸಿಂಧೂರಿ ಅವರು ಭಾವುಕರಾದರು.










