ಕೊಡಗು : ಇಬ್ಬರನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆಯಾಗಿದೆ.
ಇಂದು ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೇಟ್ ಬಳಿ ಹುಲಿ ಸೆರೆಯಾಗಿದೆ. ಮುಂಜಾನೆಯಿಂದಲೇ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ 4 ಸಾಕಾನೆ ಬಳಸಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೊನೆಗೂ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 12ರಂದು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ 12 ವರ್ಷದ ಬಾಲಕ ಚೇತನ್ ಮೇಲೆ ದಾಳಿ ನಡೆಸಿದ್ದ ವ್ಯಾಘ್ರ ಆತನನ್ನು ಕೊಂದು ಹಾಕಿತ್ತು. ಇದಾದ 24 ಗಂಟೆಗಳಲ್ಲಿ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಳಿ ನಡೆದ ಹುಲಿ ದಾಳಿಯಲ್ಲಿ ರಾಜು (75) ಸಾವನ್ನಪ್ಪಿದ್ದರು.
ಘಟನೆ ಸಂಬಂಧ ನರಭಕ್ಷಕ ಹುಲಿ ಕೊಲ್ಲುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹುಲಿ ಸೆರೆಗೆ ಸರ್ಕಾರ ಆದೇಶಿಸುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದರು. ಇದೀಗ ಹುಲಿಯನ್ನ ಸೆರೆ ಹಿಡಿಯಲಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.










