ಈ ವರ್ಷ ಗಣೇಶೋತ್ಸವ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ : ಸಚಿವ ಆರ್.ಅಶೋಕ್.

94
firstsuddi

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಗಣೇಶೋತ್ಸವಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್ ಇದ್ದ ಕಾರಣ ಗಣೇಶೋತ್ಸವ ಆಚರಣೆಗೆ ಮಿತಿ ಹೇರಲಾಗಿತ್ತು. ಈಗ ಆ ರೀತಿಯ ಯಾವುದೇ ನಿಯಮಗಳು ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಕೋವಿಡ್ ಪೂರ್ವದಲ್ಲಿ ಯಾವ ರೀತಿ ಗಣೇಶೋತ್ಸವವನ್ನು ಬೀದಿಗಳಲ್ಲಿ ಆಚರಿಸುತ್ತಿದ್ದರೋ ಆ ರೀತಿ ಆಚರಿಸಬಹುದು. ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಮೂರ್ತಿ ಕೂರಿಸಲು ಆವಕಾಶವಿಲ್ಲ. ಪರಿಸರ ಪ್ರೇಮಿ ಮಣ್ಣಿನ ಗಣೇಶಮೂರ್ತಿಗಳನ್ನು ಕೂರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈದ್ಗಾ ಮೈದಾನ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ಇದುವರೆಗೂ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ತೀರ್ಮಾನಿಸಲಾಗುವುದು. ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲು ಅನುಮತಿ ಬೇಕಿಲ್ಲ. ಕಾನೂನು ಸುವ್ಯವಸ್ಥೆ ಗೊಂದಲ ಇರುವ ಕಡೆ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಹಾರಿಸಲು ಅನುಮತಿ ಬೇಕಾಗುತ್ತದೆ. ಹಾಗಾಗಿ ಚಾಮರಾಜಪೇಟೆ ಮೈದಾನ ಸೇರಿದಂತೆ ಸ್ವಾತಂತ್ರ್ಯ ಆಚರಣೆ ಸಂಬಂಧ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ ಎಂದರು.

ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಪಾಲಿಕೆ ಘೋಷಿಸಿದೆ. ಮೈದಾನದ ಬಗ್ಗೆ ದಾಖಲೆ ಇರುವವರು ಸಲ್ಲಿಸಬಹುದು ಎಂದು ನಾವು ಕೇಳಿದ್ದೆವು. 1964ರಲ್ಲಿ ಮೈದಾನ ಕಂದಾಯ ಇಲಾಖೆಯ ಆಸ್ತಿಯಾಗಿತ್ತು. ಸುಪ್ರೀಂಕೋರ್ಟ್ ಆದೇಶವಿದೆ ಎಂದು ವಕ್ಫ್ ಮಂಡಳಿ ಈ ಹಿಂದೆ ಹೇಳಿತ್ತು. ಆದರೆ ಆ ದಾಖಲೆಯನ್ನು ವಕ್ಫ್ ಬೋರ್ಡ್ ಈವರೆಗೆ ಕೊಟ್ಟಿಲ್ಲ. ಹೀಗಾಗಿ ಮೈದಾನವು ಇಂದಿಗೂ ಅದು ಕಂದಾಯ ಇಲಾಖೆಯ ಸುಪರ್ದಿಯಲ್ಲಿಯೇ ಇದೆ. ಯಾವ ಆಚರಣೆಗೆ ಮೈದಾನ ಕೊಡಬೇಕು ಎನ್ನುವುದು ಕಂದಾಯ ಇಲಾಖೆಯ ವಿವೇಚನೆಗೆ ಬಿಟ್ಟ ಸಂಗತಿ ಎಂದು ಹೇಳಿದರು.

ಆಗಸ್ಟ್ 15 ರಂದು ಪಕ್ಷದ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ಕಂಠೀರವ ಸ್ಟೇಡಿಯಂನಿಂದ ಬೈಕ್ ರ‍್ಯಾಲಿ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದರು.