ಉಡುಪಿ : ಕುಡಿದ ಅಮಲಿನಲ್ಲಿ ಗೆಳೆಯನನ್ನೇ ಹತ್ಯೆಗೈದು ಸುಡಲು ಯತ್ನ-ಆರೋಪಿಯ ಬಂಧನ…

244
firstsuddi

ಉಡುಪಿ : ಕುಡಿದ ಅಮಲಿನಲ್ಲಿ ಗೆಳೆಯನನ್ನೇ ಹತ್ಯೆಗೈದು ಮನೆಯ ಮುಂದೆಯೇ ಮೃತದೇಹವನ್ನು ಸುಡಲು ಯತ್ನಿಸಿದ ಘಟನೆ ಜಿಲ್ಲೆಯ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರ್ಮಾಳು ನಿವಾಸಿ ಹೇಮಂತ್ ಪೂಜಾರಿ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪುಂಚಲಕಾಡು ನಿವಾಸಿ ಆಲ್ಫನ್ ಡಿಸೋಜಾ(50) ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಆಲ್ಫನ್ ಡಿಸೋಜಾ ಹಾಗೂ ಹೇಮಂತ್ ಪೂಜಾರಿ ಇಬ್ಬರು ಸ್ನೇಹತರಾಗಿದ್ದು, ಪ್ರತಿದಿನ ಇಬ್ಬರೂ ಜೊತೆಗೂಡಿ ಮಧ್ಯ ಸೇವನೆ ಮಾಡುತ್ತಿದ್ದರು. ನಿನ್ನೆ ರಾತ್ರಿಯೂ ಕೂಡಾ ಎಂದಿನಂತೆ ಇಬ್ಬರೂ ಮಧ್ಯ ಸೇವಿಸಿ ಆಲ್ಫನ್ ಡಿಸೋಜಾ ಅವರ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಈ ವೇಳೆ ಆಲ್ಫನ್ ಡಿಸೋಜಾ ಸ್ನೇಹಿತ ಹೇಮಂತ್ ಪೂಜಾರಿಯನ್ನು ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿ ಕುಡಿದ ಅಮಲಿನಲ್ಲಿ ಮೃತದೇಹವನ್ನು ಸುಡಲು ಯತ್ನಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಶಿರ್ವ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.