ಉಡುಪಿ : ವೈದ್ಯರ ನಿರ್ಲಕ್ಷಕ್ಕೆ ಮಹಿಳೆ ಬಲಿ-ಸಾರ್ವಜನಿಕರಿಂದ ಪ್ರತಿಭಟನೆ…

250
firstsuddi

ಉಡುಪಿ : ತಲೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದು, ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಇಂದಿರಾ ನಗರದ ಶಿವಪ್ರಸಾದ್ ಎಂಬುವವರ ಪತ್ನಿ ಶ್ರೀರಕ್ಷಾ(26) ತಲೆನೋವಿನಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಚುಚ್ಚು ಮದ್ದು ನೀಡಿ ಮನೆಗೆ ತೆರಳುವಂತೆ ಸೂಚಿಸಿದ್ದರು ಎನ್ನಲಾಗಿದೆ. ಮನೆಗೆ ತೆರಳಿ ಮಲಗಿದ್ದ ಶ್ರೀರಕ್ಷಾ ಅವರ ಬಾಯಲ್ಲಿ ನೊರೆ ಬರುತ್ತಿರುವುದು ಗಮನಿಸಿ ಮತ್ತೆ ಬೇರೊಂದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಮೊದಲು ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲೂ ಕೂಡಾ ಗೊಂದಲ ಏರ್ಪಟ್ಟಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಶವಾಗಾರದ ಪ್ರತಿಭಟನೆ ನಡೆಸಿದರು.
ಮಹಿಳೆಗೆ ಮೊದಲು ಆಂಟಿಜೆನ್ ರ್ಯಾಪಿಡ್ ಟೆಸ್ಟ್ ನಡೆಸಿದ ವೇಳೆ ನೆಗೆಟಿವ್ ಬಂದಿದ್ದು, ತಡರಾತ್ರಿ ಬಂದ ವರದಿಯಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಪಾಸಿಟಿವ್ ಬಂದ ವರದಿಯ ಪ್ರತಿಯಲ್ಲಿ ಸರ್ಕಾರಿ ವೈದ್ಯರ ಸಹಿಯೂ ಇಲ್ಲ ಸೀಲೂ ಇಲ್ಲ. ಪಾಸಿಟಿವ್ ಎಂದು ವರದಿ ಕೊಟ್ಟು ಖಾಸಗಿ ಆಸ್ಪತ್ರೆ ರಕ್ಷಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆ ವಿರುದ್ಧ, ಮಹಿಳೆ ಪತಿ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್‍ತಪಡಿಸಿದ್ದು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಿಲ್ಲಾಸ್ಪತ್ರೆಯ ಬಳೀ ಸೇರಿದ್ದರು. ಸ್ಥಳದಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.