ಎತ್ತಿನಭುಜ ಚಾರಣಕ್ಕೆ ಬಂದ ಪ್ರವಾಸಿಗರ ಪರದಾಟ: ಮೂಲಸೌಕರ್ಯವಿಲ್ಲದೆ ಟ್ರೆಕ್ಕಿಂಗ್ ಓಪನ್ ಆರೋಪ

13

 

 

ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಚಾರಣಕ್ಕೆ ಬಂದ ಪ್ರವಾಸಿಗರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುವಂತಾಗಿದೆ.

ಮೂಡಿಗೆರೆ :ಕಳೆದ ಹಲವು ತಿಂಗಳಿನಿಂದ ಬಂದ್ ಆಗಿದ್ದ ಎತ್ತಿನಭುಜ ಚಾರಣವನ್ನು ಅರಣ್ಯ ಇಲಾಖೆ ಇತ್ತೀಚೆಗೆ ಮತ್ತೆ ಆರಂಭಿಸಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಚಾರಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆನ್‌ಲೈನ್ ಮೂಲಕ ಚಾರಣವನ್ನು ಬುಕ್ ಮಾಡಿಕೊಂಡು ದೂರದ ಊರುಗಳಿಂದ ಆಗಮಿಸಿದ ಪ್ರವಾಸಿಗರಿಗೆ ಚಾರಣ ಮಾರ್ಗದ ಬಗ್ಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ದಟ್ಟ ಅರಣ್ಯದೊಳಗೆ ಯಾವ ರಸ್ತೆಯಲ್ಲಿ ಸಾಗಬೇಕು ಎಂಬುದು ತಿಳಿಯದೆ ಕೆಲ ಪ್ರವಾಸಿಗರು ಚಾರಣ ಮುಂದುವರಿಸಲಾಗದೆ ವಾಪಸ್ ಬಂದಿದ್ದಾರೆ.

ಚಾರಣ ಮಾರ್ಗದಲ್ಲಿ ಹಲವೆಡೆ ಮರಗಳು ಬಿದ್ದಿದ್ದು, ರಸ್ತೆ ಕೂಡ ಅಡ್ಡಿಪಡಿಸಿರುವ ಸ್ಥಿತಿ ಕಂಡುಬಂದಿದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಚಾರಣಕ್ಕೆ ಅವಕಾಶ ನೀಡಿರುವುದು ಪ್ರವಾಸಿಗರ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

SOP ಪಾಲನೆ, ಮಾರ್ಗದರ್ಶನ ಹಾಗೂ ಗೈಡ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಚಾರಣ ಆರಂಭಿಸಿರುವುದಕ್ಕೆ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

5 ಕಿ.ಮೀ. ಚಾರಣಕ್ಕೆ ಅರಣ್ಯ ಇಲಾಖೆ ₹300 ಶುಲ್ಕ ನಿಗದಿ ಮಾಡಿದ್ದು, ಗೈಡ್‌ಗಾಗಿ ಪ್ರತಿ ವ್ಯಕ್ತಿಗೆ ₹75 ಪ್ರತ್ಯೇಕ ಶುಲ್ಕ ನಿಗದಿಯಾಗಿದೆ. ಆದರೆ ಶುಲ್ಕ ಪಾವತಿಸಿದರೂ ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬುದು ಪ್ರವಾಸಿಗರ ಆರೋಪವಾಗಿದೆ.

ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಚಾರಣ ಮಾರ್ಗವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ಸೂಕ್ತ ಸೂಚನಾ ಫಲಕಗಳು, ಮಾರ್ಗದರ್ಶನ ಮತ್ತು ಗೈಡ್ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಚಾರಣಕ್ಕೆ ಅವಕಾಶ ನೀಡಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಗುತ್ತಿ  ಜಗದೀಶ್ ಮಾತನಾಡಿ, ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಂದ ಹಣ ಪಡೆದುಕೊಳ್ಳುವಾಗ, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಹಾಗೂ ಸೂಕ್ತ ಗೈಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಮೂಡಿಗೆರೆ ತಾಲೂಕಿನ ಪ್ರವಾಸೋದ್ಯಮ ಹಲವು ಕಾರಣಗಳಿಂದ ಕುಸಿತದ ಹಂತದಲ್ಲಿದೆ. ಪ್ರವಾಸೋದ್ಯಮಕ್ಕೆ ಪ್ರಮುಖ ಆಧಾರವಾಗಿರುವ ಎತ್ತಿನಭುಜದಂತಹ ಪ್ರವಾಸಿ ತಾಣವನ್ನು ನಿರ್ಲಕ್ಷ್ಯ ಮಾಡಿದರೆ, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಮುಂದಿನ ದಿನಗಳಲ್ಲಿ ಈ ಕಡೆ ಮುಖ ಮಾಡಿ ನೋಡುವುದಿಲ್ಲ. ಇದರಿಂದ ಸ್ಥಳೀಯ ಹೋಂಸ್ಟೇ, ರೆಸಾರ್ಟ್ ಹಾಗೂ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಹಲವು ಕುಟುಂಬಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಆದ್ದರಿಂದ ಪ್ರವಾಸಿಗರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ, ಚಾರಣ ಮಾರ್ಗವನ್ನು ಸರಿಪಡಿಸಿ, ಅಗತ್ಯ ಮೂಲಸೌಕರ್ಯ ಮತ್ತು ಗೈಡ್ ವ್ಯವಸ್ಥೆ ಕಲ್ಪಿಸುವ ಮೂಲಕ ಎತ್ತಿನಭುಜ ಪ್ರವಾಸಿ ತಾಣದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು.