ಎರಡನೇ ಬಾರಿ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ…

54
firstsuddi

ಗಾಂಧಿನಗರ: ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್ ಅವರು ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಂದು ಗಾಂಧಿನಗರದ ಹೊಸ ಸಚಿವಾಲಯದ ಹೆಲಿಪ್ಯಾಡ್ ಗ್ರೌಂಡ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಭೂಪೇಂದ್ರ ಪಟೇಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಭೂಪೇಂದ್ರ ಪಟೇಲ್ ಅವರು ಗುಜರಾತ್ 18ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಜೊತೆ ಇಂದು ಒಟ್ಟು 16 ಮಂದಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿದರು.

ಈ ಹಿಂದೆ ಭೂಪೇಂದ್ರ ಪಟೇಲ್ ಸಂಪುಟದಲ್ಲಿದ್ದ ಕಾನು ದೇಸಾಯಿ, ಋಷಿಕೇಶ್ ಪಟೇಲ್, ರಾಘವ್ಜಿ ಪಟೇಲ್, ಬಲವಂತಸಿನ್ಹ್ ರಜಪೂತ್, ಕುನ್ವರ್ಜಿ ಬವಲಿಯಾ, ಮುಲು ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಮತ್ತೊಮ್ಮೆ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೆ.ಪಿ ನಡ್ಡಾ, ಕೆಲ ಕೇಂದ್ರ ಸಚಿವರು ಭಾಗಿಯಾದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳು, ಮಾಜಿ ಸಿಎಂ ಯಡಿಯೂರಪ್ಪ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷವಾಗಿ 200 ಸಂತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.