ಎರಡು ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ : 9 ಮಂದಿಯ ಬಂಧನ…

88
firstsuddi

ಮಂಗಳೂರು : ನಗರದ ಖಾಸಗಿ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎರಡು ವಿದ್ಯಾರ್ಥಿಗಳ ತಂಡಗಳ ನಡುವೆ ಹೊಡೆದಾಟ ನಡೆದಿದ್ದು, 9 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹದ್, ಅಬುತಹರ್, ಮುಹಮ್ಮದ್ ನಾಸಿಫ್, ಆದರ್ಶ ಎಂದು ಗುರುತಿಸಲಾಗಿದೆ.

ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ನಿನ್ನೆ ಸಂಜೆ ಸುಮಾರು 7 ಗಂಟೆಗೆ ತನ್ನ ಸ್ನೇಹಿತ ಅಭಿರಾಮಿಯನ್ನು ಭೇಟಿ ಮಾಡಿ ಮಾತನಾಡಿಸುವಾಗ ಸಿನಾನ್ ಎಂಬಾತ ಹಾಗು ಇತರ 8 ಜನ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ ಹಾಗು ಮೊಹಮ್ಮದ್ ನಸಿಪ್ ಗಾಯವಾಗಿದೆ. ಗಲಾಟೆ ಬಿಡಿಸಲು ಬಂದಿದ್ದ ಆದರ್ಶ ಅವರ ಸ್ನೇಹಿತರಾದ ಅದೇ ಹಾಸ್ಟೇಲ್ ನ ಶನಿನ್ ಮತ್ತು ಶ್ರವಣ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆದರ್ಶ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸರು ಗುಜ್ಜರಕೆರೆ ಬಳಿ ಇರುವ ಹಾಸ್ಟೆಲ್ ಗೆ ತೆರಳಿದ್ದಾರೆ. ಈ ವೇಳೆ ತಮ್ಮನ್ನು ಬಂಧಿಸದಂತೆ ಕೆಲವು ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ.

ಪ್ರಕರಣದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.