ಎಲ್ಲ ಭಾಷೆಗಳು ದೇಶದ ಆತ್ಮ ಎಂದ ಪ್ರಧಾನಿ ; ಮೋದಿ ಮಾತಿಗೆ ಕಿಚ್ಚನ ಮೆಚ್ಚುಗೆ…

90
firstsuddi

ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು. ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ನಿನ್ನೆ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಕೆಲವು ದಿನಗಳಿಂದ ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಬಿಜೆಪಿಯು ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತದೆ. ಅವುಗಳನ್ನು ಪೂಜನೀಯವಾಗಿ ಪರಿಗಣಿಸುತ್ತದೆ. ಎಲ್ಲ ಭಾಷೆಗಳು ದೇಶದ ಆತ್ಮಗಳಿದ್ದಂತೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಪ್ರಾದೇಶಿಕ ಭಾಷೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದಿದ್ದರು.

ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ನಾವು ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ. ಅವರನ್ನು ನಾಯಕರಾಗಿಯೂ ನೋಡುತ್ತೇವೆ. ಇದೀಗ ಪ್ರಾದೇಶಿಕ ಭಾಷೆಗಳ ಬಗ್ಗೆ ಅವರು ನೀಡಿರುವ ಹೇಳಿಕೆ ಎಲ್ಲಾ ಭಾಷೆಗಳಿಗೆ ಅನ್ವಯವಾಗುತ್ತದೆ. ಅವರ ಮಾತುಗಳು ಮಾತೃಭಾಷೆಯನ್ನು ಗೌರವಿಸುವ ಪ್ರತಿಯೊಬ್ಬರಿಗೆ ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ.