ಎಸ್.ಎಸ್.ಎಲ್.ಸಿ ಎಕ್ಸಾಂನಲ್ಲಿ ಸರಳೀಕರಣ ; ಎರಡು ದಿನ ಮಾತ್ರ ಪರೀಕ್ಷೆ…

132
firstsuddi

ಬೆಂಗಳೂರು : ಕೊರೊನಾ ಹಿನ್ನಲೆ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡು ದಿನ ಮಾತ್ರ ನಡೆಸಲು ಸರ್ಕಾರ ನಿರ್ಧರಿಸಿದೆ.

ಕೋವಿಡ್ ಹಿನ್ನಲೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹಿಂದಿನ ಸಾಲಿನ (9ನೇ ತರಗತಿ) ಪರೀಕ್ಷೆ ನಡೆದಿಲ್ಲ. ಹೀಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಪರೀಕ್ಷೆ ಸರಳೀಕರಿಸಿ ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. 6 ವಿಷಯಗಳ ಪರೀಕ್ಷೆ ಎರಡೇ ದಿನದಲ್ಲಿ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ.

ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನೀಡಲಾಗುತ್ತದೆ. 3 ಕೋರ್ ವಿಷಯಗಳ 120 ಅಂಕಗಳ ಪ್ರಶ್ನೆ ಪತ್ರಿಕೆ ಇರಲಿದೆ. ಪರೀಕ್ಷೆ ಸಮಯವನ್ನು ಬೆಳಗ್ಗೆ 10:30 ರಿಂದ 1:30ಕ್ಕೆ ನಿಗದಿ ಮಾಡಲಾಗಿದೆ. ಪ್ರತಿ ಭಾಗಕ್ಕೆ 1 ಗಂಟೆ ಸಮಯದಂತೆ 3 ವಿಷಯಗಳಿಗೆ 3 ಗಂಟೆಯ ಸಮಯವನ್ನು ಪರೀಕ್ಷಾರ್ಥಿಗಳಿಗೆ ನೀಡಲಾಗುತ್ತದೆ. ಉತ್ತರ ಪತ್ರಿಕೆಯು ಒಎಂಆರ್ ರೂಪದಲ್ಲಿರಲಿದ್ದು, ಒಎಂಆರ್ ಉತ್ತರ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಶೇಡ್ ಮಾಡುವ ಮೂಲಕ ವಿದ್ಯಾರ್ಥಿಗಳು ಉತ್ತರಿಸಬೇಕು.

ಈ ವರ್ಷ ಪರೀಕ್ಷಾ ಕೇಂದ್ರಗಳಲ್ಲಿ ಒಂದು ಕೊಠಡಿಗೆ 12 ವಿದ್ಯಾರ್ಥಿಗಳಂತೆ ಒಂದು ಡೆಸ್ಕ್’ಗೆ ಕೇವಲ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಆರು ವಿಷಯಗಳಿಗೆ ತಲಾ 40 ಅಂಕಗಳ ಪರೀಕ್ಷೆ ನಡೆಯಲಿದ್ದು, 40 ಅಂಕಗಳನ್ನು 80 ಅಂಕಗಳಿಗೆ ಪರಿವರ್ತಿಸಲಾಗುತ್ತದೆ. ಇದರ ಜೊತೆಗೆ ಅಂತರಿಕ ಅಂಕಗಳನ್ನು ಸೇರ್ಪಡೆ ಮಾಡಿ, ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.