ಏ.1 ರಂದು ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ – ಇಂದು ಮಠಕ್ಕೆ ರಾಹುಲ್ ಗಾಂಧಿ, ನಾಳೆ ಅಮಿತ್ ಶಾ ಭೇಟಿ…

70
firstsuddi

ತುಮಕೂರು : ಕಾಯಕಯೋಗಿ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಲಿಂಗೈಕ್ಯರಾಗಿ ಮೂರು ವರ್ಷ ಕಳೆದಿವೆ. ನಾಳೆ ಶಿವಕುಮಾರ ಶ್ರೀ ಗಳ 115 ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ. ಇಂದು ಸಿದ್ದಗಂಗಾ ಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ನಾಳೆ ಅಮಿತ್ ಷಾ ಭೇಟಿ ನೀಡಲಿದ್ದಾರೆ.

ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದಲ್ಲಿ ಎರಡು ದಿನ ವಾಸ್ತವ್ಯ ಹೂಡಿ ಕಾಂಗ್ರೆಸ್ ನಾಯಕರ ಜೊತೆ ಸಭೆ, ಸಮಾಲೋಚನೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ರಸ್ತೆ ಮೂಲಕ ಆಗಮಿಸಲಿರುವ ರಾಹುಲ್ ಗಾಂಧಿ, ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಿದ್ದಲಿಂಗ ಶ್ರೀ ಭೇಟಿಯಾಗಿ ಆಶಿರ್ವಾದ ಪಡೆಯಲಿದ್ದಾರೆ. ಅಲ್ಲಿಂದ ಪುನಃ ಸಂಜೆ ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ನಾಳೆ(ಏ.1) ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿರುವ ಪಕ್ಷದ ಹೊಸ ಕಟ್ಟಡದಲ್ಲಿ ಬಿಬಿಎಂಪಿ ಭಾಗದ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಇನ್ನೂ ನಾಳೆ ನಡೆದಾಡುವ ದೇವರು ಡಾ.ಶಿವಕುಮಾರ್ ಶ್ರೀ ಗಳ 115 ನೇ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ 10.45 ಕ್ಕೆ ತುಮಕೂರಿನ ವಿವಿ ಹೆಲಿಪ್ಯಾಡ್ ಗೆ ಅಮಿತ್ ಷಾ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀಗಳ 115ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರಿಸುಮಾರು 2-3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಸುತ್ತೂರು ಶ್ರೀಗಳು, ಸಿಎಂ ಬೊಮ್ಮಾಯಿ ಸೇರಿ ಹಲವರು ಭಾಗಿ ಆಗಲಿದ್ದಾರೆ.

ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಹಾಗೂ ಮಠದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.