ಲಖನೌ : ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವು ಪ್ರಕರಣದ ವರದಿಯನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶ ನೀಡಿದೆ.
ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತು ಕೇಂದ್ರ ತನಿಖಾ ದಳ ತನಿಖೆ ನಡೆಸಿ, ತಿವಾರಿ ಅವರ ಸಾವು ಸಹಜ ಎಂದು ವರದಿಯನ್ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಆದರೆ, ಅನುರಾಗ್ ಕುಟುಂಬಸ್ಥರ ದೂರಿನನ್ವಯ ಮರು ತನಿಖೆಗೆ ಕೋರ್ಟ್ ಆದೇಶ ನೀಡಿದೆ.
ಅಧಿಕಾರಿ ಅನುರಾಗ್ ತಿವಾರಿ ತಮ್ಮ ಜನ್ಮದಿನ ಮೇ 17, 2017 ರಂದೇ ಹಜರತ್ ಗಂಜ್ ನ ಮೀರಾ ಬಾಯಿ ಮಾರ್ಗದಲ್ಲಿರುವ ಅತಿಥಿ ಗೃಹದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದರು. ಆಗ ತಿವಾರಿ ಬೆಂಗಳೂರಿನಲ್ಲಿ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿದ್ದರು.
ಅನುರಾಗ್ ತಿವಾರಿ ಅನ್ನಭಾಗ್ಯ ಅಕ್ಕಿ ಹಗರಣದ ಬಗ್ಗೆ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದ್ದರು. ಸಾವಿಗೂ ಕೆಲ ದಿನಗಳ ಹಿಂದೆ ಸಹೋದರ ಮಯಾಂಕ್ ಗೆ, ಕರ್ನಾಟಕ ಸರ್ಕಾರದಲ್ಲಿ ದಕ್ಷ ಐಎಎಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನನಗೂ ಸಹ ಜೀವ ಭಯವಿದೆ. ಆದಷ್ಟು ಬೇಗ ಮರಳಿ ಉತ್ತರಪ್ರದೇಶಕ್ಕೆ ಬರುವುದಾಗಿ ಮೆಸೇಜ್ ಮಾಡಿದ್ದರು.










