ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರು ಮೃತಪಟ್ಟ ಬಗ್ಗೆ ಈ ಮೊದಲು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಫೇಕ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಅಭಿನಯಿಸಿದ್ದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ನಟ ಜೊತೆ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಕನ್ನಡ ಚಿತ್ರರಂಗದಲ್ಲೀ ಛಾಪು ಮೂಡಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.
ಆಗಸ್ಟ್ 19-1942 ರಂದು ಹುಣಸೂರು ನಲ್ಲಿ ಶಮಾರಾವ್ ಮತ್ತು ಜಯಮ್ಮರವರಿಗೆ ಜನಿಸಿದ ದ್ವಾರಕೀಶ್ ಅವರು, ನಟ, ನಿರ್ದೇಶಕ ಮತ್ತು ನಿರ್ಮಾಪಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದರು. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ , ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. ಆದರೆ 1963ರಲ್ಲಿ ವ್ಯಾಪಾರ ಬಿಟ್ಟು ಬಣ್ಣದ ಬದುಕಿಗೆ ಕಾಲಿಟ್ಟರು.
ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ, ‘ಕಳ್ಳ-ಕುಳ್ಳ ಜೋಡಿ’ ಎಂದು ಪ್ರಸಿದ್ಧವಾಗಿತ್ತು.










