ಕನ್ನಡ ರಾಜ್ಯೋತ್ಸವ : ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ.

65
firstsuddi

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಜನತೆಗೆ ಕನ್ನಡದಲ್ಲೇ 66ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಜತೆಗೆ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸಹ ನಾಡಿನ ಸಮಸ್ತ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

“ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ” ಎಂದು ಕನ್ನಡದಲ್ಲಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಕೇರಳ ಕೇರಳ ಜನತೆಗೆ ಮಲಯಾಳಂನಲ್ಲಿ, ಆಂಧ್ರದ ಜನತೆಗೆ ತೆಲುಗಿನಲ್ಲಿ ಹಾಗೂ ಛತ್ತೀಸ್​ಗಢ, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.

“ಕರ್ನಾಟಕ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ಸಹೋದರ ಮತ್ತು ಸಹೋದರಿಯರಿಗೆ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು ಅದ್ಭುತ ಸಂಸ್ಕೃತಿ, ಖಾದ್ಯ, ಸಂಪ್ರದಾಯಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಚೆಲುವಿನ ನಾಡು ಭಾರತದ ಪ್ರಗತಿಗೆ ಸದಾ ಕೊಡುಗೆ ನೀಡುತ್ತಿರಲಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

“ನಾಡಿನ ಸಮಸ್ತ ಜನತೆಗೆ 66ನೇ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಕಾಮನೆಗಳು. ನಾಡಿನ ಏಕತೆ, ಸ್ವಾಭಿಮಾನ, ಸಾಮರಸ್ಯ, ಸಹಬಾಳ್ವೆಯ ಸಂಕೇತವಾದ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಆಚರಣೆ. ನಮ್ಮ ಕನ್ನಡದ ಅಸ್ಮಿತೆ ಸದಾ ಜಾಗೃತವಾಗಿರಲಿ, ಕನ್ನಡತನದ ಅಭಿಮಾನ ನಿರಂತರವಾಗಿರಲಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

“ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು, ನುಡಿ, ಜನಪದ, ಇತಿಹಾಸ, ಪರಂಪರೆ, ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವ ದೃಢ ಸಂಕಲ್ಪ ನಮ್ಮದಾಗಿರಲಿ. ಸಮೃದ್ಧ, ಆರೋಗ್ಯಪೂರ್ಣ, ಪ್ರಗತಿಶೀಲ ನವಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ” ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.