ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡಗೆ ಐಟಿ ಶಾಕ್…

107
firstsuddi

ಚಿಕ್ಕಮಗಳೂರು : ಮಾಜಿ ಎಮ್ಎಲ್ ಸಿ, ಕಾಂಗ್ರೆಸ್ ಪಕ್ಷದ ನಾಯಕಿ ಎ.ವಿ. ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಮಾರು 10 ವಾಹನಗಳಲ್ಲಿ ಬಂದ ಅಧಿಕಾರಿಗಳು ನಗರದ ಹೂವಿನ ಮಾರ್ಕೆಟ್ ನಲ್ಲಿರುವ ಗಾಯತ್ರಿಯವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಅಳಿಯನ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇನ್ನು ಐಟಿ ಅಧಿಕಾರಿಗಳ ತಂಡ ತಾಲೂಕಿನ ಮರ್ಲೆ ಗ್ರಾಮದಲ್ಲಿರುವ ಗಾಯತ್ರಿ ಶಾಂತೇಗೌಡ ಒಡೆತನದಲ್ಲಿರುವ ಕ್ರಷರ್ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಗಾಯತ್ರಿ ಅವರ ಮನೆಯಲ್ಲಿ ಕೆಲಸ ಮಾಡುವವರ ಮನೆಗಳ ಮೇಲೂ ಐಟಿ ದಾಳಿ ನಡೆದಿದೆ. ಯಾರಿಗೂ ಅನುಮಾನ ಬರಬಾರದೆಂದು ಐಟಿ ಅಧಿಕಾರಿಗಳು ತಮ್ಮ ಕಾರಿಗೆ ಮದುವೆ ಬೋರ್ಡ್ ಹಾಕಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಗಾಯತ್ರಿ ಶಾಂತೇಗೌಡ ಅವರ ಮನೆ ಸೇರಿದಂತೆ ಅಳಿಯ ಹಾಗೂ ಸಂಬಂಧಿಕರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ, ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಐಟಿ ಅಧಿಕಾರಿಗಳು ಹಾಗೂ ಶಾಸಕ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಸದ್ಯ ಗಾಯತ್ರಿ ಶಾಂತೇಗೌಡ ನಿವಾಸದ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.