45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಿಂದ ಹೊರಗುಳಿದ ಅಜಂ ಖಾನ್ ಕುಟುಂಬ.

58
firstsuddi

ಲಕ್ನೋ : 1977ರ ನಂತರ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಕುಟುಂಬ ಸದಸ್ಯರು ರಾಮ್ ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ನಂತರ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದೆ.

ಸಮಾಜವಾದಿ ಪಕ್ಷ ಈ ಬಾರಿ, ಅಜಂ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸಿಲ್ಲ. ಬದಲಾಗಿ ಅಜಂ ಖಾನ್ ಅವರ ನಿಷ್ಠಾವಂತ ಅಸೀಮ್ ರಾಜಾಗೆ ಟಿಕೆಟ್ ನೀಡಲಾಗಿದೆ.

ಅಜಂ ಖಾನ್ ಅಥವಾ ಅವರ ಕುಟುಂಬದ ಸದಸ್ಯರು 1977 ರಿಂದ ನಿರಂತರವಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅದರಲ್ಲಿ ಹತ್ತು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ. 2019ರಲ್ಲಿ ಅಜಂ ಖಾನ್ ಸಂಸತ್ ಸದಸ್ಯರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ತಂಜೀನ್ ಫಾತಿಮಾ ಸ್ಪರ್ಧಿಸಿ ಗೆದ್ದಿದ್ದರು.

2014ರಲ್ಲಿ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದಾಗ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪದಡಿ ಅಜಂ ಖಾನ್ ಅವರ ಪತ್ನಿ ಮತ್ತು ಪುತ್ರನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ನಂತರ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಾಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅಜಂ ಖಾನ್ ಅವರನ್ನು ಅಸೆಂಬ್ಲಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.