ಬೆಂಗಳೂರು : ನಗರದಲ್ಲಿಂದು ಕಾಂಗ್ರೆಸ್ ನವರಿಂದ ರಾಜಭವನ ಚಲೋ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್ ಅವರು, ಕಾಂಗ್ರೆಸ್ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಅವರೇ ಹೊಣೆ. ಕಾಂಗ್ರೆಸ್ ನವರೇ ನೈತಿಕ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್ ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಅವರಿಂದು ರಾಜಭವನ ಚಲೋ ಮಾಡ್ತಿದ್ದಾರೆ. ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಕಾಂಗ್ರೆಸ್ ನಾಯಕರ ನಡೆ ನಾಚಿಕೆ ತರಿಸುವಂತದ್ದು, ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡ್ತಾರೆ, ಇನ್ನೊಂದು ಕಡೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸ ಮಾಡ್ತಾರೆ ಎಂದು ಕಾಂಗ್ರೆಸ್ ರಾಜಭವನ ಮುತ್ತಿಗೆಯನ್ನು ಟೀಕಿಸಿದರು.
ಬೆಂಗಳೂರಿನ ಶಾಲೆಗಳಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ಮಾತನಾಡಿದ ಸಚಿವರು, ಒಂದೆರೆಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಅದು ಒಂದೋ ಎರಡೋ ಶಾಲೆ ಅಷ್ಟೇ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಚೆಕ್ ಮಾಡ್ತಿದ್ದೇವೆ. ಶಾಲೆಗಳಲ್ಲಿ ಎಲ್ಲಾ ನಿಯಮ ಪಾಲನೆ ಮಾಡುತ್ತಿದ್ದಾರೆ ಎಂದರು.










