ಕಾಶ್ಮೀರದ ಕುಲ್ಗಾಮ್‍ನಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ…

65
firstsuddi

ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಉಗ್ರರ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದೆ. 2 ದಿನಗಳ ಹಿಂದೆ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೊರಾ ಪ್ರದೇಶದಲ್ಲಿ ಶಾಲಾ ಶಿಕ್ಷಕಿ ರಜನಿ ಬಾಲಾಳನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಮೇ 12ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಇದೀಗ ಕುಲ್ಗಾಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ವೋರ್ವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಲಾಗಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆ, ಮೋಹನ್ ಪೋರಾದಲ್ಲಿರುವ ಎಲ್ಲಕಿ ದೇಹತಿ ಬ್ಯಾಂಕ್ ನ ಮ್ಯಾನೇಜರ್ ವಿಜಯ್ ಕುಮಾರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದ ವೇಳೆ ಅಲ್ಲಿಗೆ ತೆರಳಿರುವ ಉಗ್ರ, ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಬ್ಯಾಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಜಸ್ಥಾನದ ಹನುಮಾನ್ ಗಢ ಮೂಲದ ಕುಮಾರ್ ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಲ್ಗಾಮ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಹನುಮಾನ್ ಗಢ ನಿವಾಸಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಹತ್ಯೆ ಅತ್ಯಂತ ಖಂಡನೀಯ. ಕಾಶ್ಮೀರದಲ್ಲಿ ಶಾಂತಿ ನೆಲೆಸುವಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.

ಇಂದು ಬೆಳಗ್ಗೆ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದ ಖಾಸಗಿ ವಾಹನ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೋಪಿಯಾನ್ ಘಟನೆ ನಡೆದ ಪ್ರದೇಶದಿಂದ ಕೇವಲ 12 ಕಿಮೀ ಅಂತರದಲ್ಲೇ ಬ್ಯಾಂಕ್ ಮ್ಯಾನೇಜರ್ ನ ಹತ್ಯೆ ನಡೆದಿದೆ.