ಮೈಸೂರು : ಕುಡಿದ ಮತ್ತಿನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ, ಎದುರು ಮನೆಯ ಒಬ್ಬರನ್ನು ಕೊಂದು, ಬಳಿಕ ಕೊಂದಿದ್ದು ಮಾತ್ರವಲ್ಲದೇ, ತನ್ನ ಗರ್ಭಿಣಿ ಪತ್ನಿ ಸೇರಿದಂತೆ ಐವರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ಈರಯ್ಯ ಕೊಲೆ ಆರೋಪಿ. ಈರಯ್ಯನ ಎದುರು ಮನೆಯ ನಿಂಗಮ್ಮ ಹಲ್ಲೆಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಈರಯ್ಯನ ಎರಡನೇ ಪತ್ನಿ ಮಹದೇವಮ್ಮ, ಈರಯ್ಯನ ತಾಯಿಯಾದ ಗೌರಮ್ಮ, ಕೊಲೆಯಾದ ನಿಂಗಮ್ಮನ ಮಗನಾದ ಸುರೇಶ್ ಹಾಗೂ ಜಗಳ ಬಿಡಿಸಲು ಬಂದ ಮಹಾದೇವ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೊದಲನೇ ಪತ್ನಿಯನ್ನು ಕೊಂದು ಜೈಲಿನಿಂದ ಹೊರ ಬಂದಿದ್ದ ಈರಯ್ಯ ಇಂದು ಕುಡಿತದ ಅಮಲಿನಲ್ಲಿ ಕೊಲೆಗೈದಿದ್ದಾನೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.










