ನವದೆಹಲಿ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿದೆ.
ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡಿದ್ದರು. ಈ ಸಂಬಂಧ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದೆಹಲಿಯ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಜಯ್ ಸಿಂಗ್, ಕರ್ನಾಟಕದ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಿಸಲು ಅರ್ಜಿ ನೀಡಿದ್ದೇನೆ. ಈಶ್ವರಪ್ಪನವರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ. ರಾಷ್ಟ್ರಧ್ವಜವನ್ನು ಅವಮಾನಿಸಿರುವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸುವುದಷ್ಟೇ ಅಲ್ಲ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ಹಿಜಾಬ್ ಗಲಾಟೆ ವೇಳೆ ಶಿವಮೊಗ್ಗ ಕಾಲೇಜಿನ ಧ್ವಜಸ್ತಂಭದ ಮೇಲೆ ಕೆಲ ಪುಂಡ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದರು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ವೇಳೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ನವರು ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಅಲ್ಲಿ ಹಾಗೆ ನಡೆದಿಲ್ಲ. ಕೇಸರಿ ಧ್ವಜವನ್ನು ಎಲ್ಲಿ ಬೇಕಾದರೂ ಹಾಕಬಹುದು. ಇಂದಲ್ಲ ನಾಳೆ ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಬಹುದು. ಇವತ್ತೆ ಅಂತ ಹೇಳುತ್ತಿಲ್ಲ. ಮುಂದೊಂದು ದಿನ ಈ ಘಟನೆ ನಡೆಯಬಹುದು ಅಂತ ಹೇಳಿದ್ದರು.










