ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರು ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬಂಗಲೆ ನೆಲಸಮಗೊಳಿಸಲು ಬಿಎಂಸಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಆರ್‌ಡಿ ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು, ಎರಡು ವಾರಗಳ ಅವಧಿಯಲ್ಲಿ ಅನಧಿಕೃತ ಭಾಗಗಳನ್ನು ಕೆಡವಲು ಮತ್ತು ಒಂದು ವಾರದ ನಂತರ ನ್ಯಾಯಾಲಯಕ್ಕೆ ಅನುಸರಣೆ ವರದಿಯನ್ನು ಸಲ್ಲಿಸುವಂತೆ ಬಿಎಂಸಿಗೆ ನಿರ್ದೇಶನ ನೀಡಿದೆ. ಅಲ್ಲದೇ ರಾಣೆಗೆ 10 ಲಕ್ಷ ರೂ. ದಂಡವನ್ನು ವಿಧಿಸಿದ್ದು, ಎರಡು ವಾರಗಳಲ್ಲಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಈ ಮೊತ್ತವನ್ನು ನೀಡುವಂತೆ ಪೀಠವು ಸೂಚಿಸಿತು.
ನಾರಾಯಣ ರಾಣೆ ಪರ ವಕೀಲ ಶಾರ್ದೂಲ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ಆರು ವಾರಗಳ ಕಾಲ ತನ್ನ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದರು. ಆದರೆ, ಪೀಠ ಅದನ್ನು ತಿರಸ್ಕರಿಸಿತು.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ) ಈ ಹಿಂದೆ ಕೇಂದ್ರ ಸಚಿವರಿಗೆ ಮುಂಬೈ ಜುಹುದಲ್ಲಿರುವ ಬಂಗಲೆ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಇದೀಗ ಮಹತ್ವದ ಆದೇಶ ಹೊರಬಿದ್ದಿದೆ.
ನಾರಾಯಣ ರಾಣೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.










