ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ಮಗನ ಸಾವು – ಪೋಷಕರ ಗಂಭೀರ ಆರೋಪ…

104
firstsuddi

ಹಾಸನ : ಕೋವಿಡ್-19 ಲಸಿಕೆ ಹಾಕಿಸಿಕೊಂಡ ಬಳಿಕ ಮಗ ಸಾವನ್ನಪ್ಪಿದ್ದಾನೆಂದು ಪೋಷಕರು ಗಂಭಿರವಾಗಿ ಆರೋಪಿಸಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ನಡೆದಿದ್ದು, ಮೃತನನ್ನು ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಸಮೀಪದ ಬೋರನಕೊಪ್ಪಲು ತಾಂಡ್ಯದ ವಸಂತ್ ನಾಯಕ್(35) ಎಂದು ಗುರುತಿಸಲಾಗಿದೆ.

ವಸಂತ್ ನಾಯಕ್ ಸೆ.4 ರಂದು ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದು, ನಂತರ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇತ್ತ ಮಗನ ಸಾವಿಗೆ ಕೋವಿಡ್-19 ಲಸಿಕೆ ಕಾರಣ ಎಂದು ವಸಂತ್ ಪೋಷಕರು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮೃತರ ಪೋಷಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದ್ದು, ಯಾರಿಗೂ ಸಹ ಹೆಚ್ಚಿನ ಅಡ್ಡ ಪರಿಣಾಮ ಬೀರಿಲ್ಲ ಹಾಗೂ ಸಾವು ಸಂಭವಿಸಿಲ್ಲ. ಮೃತ ವ್ಯಕ್ತಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡು, ನಂತರ ಅರಸೀಕೆರೆಗೆ ಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಯಾವ ರೀತಿ ಸಾವು ಸಂಭವಿಸಿದೆ ಎಂದು ಹೇಳಬಹುದು ಎಂದಿದ್ದಾರೆ.