ಕೊರೊನಾ ಸಂಕಷ್ಟದಲ್ಲಿ ತೈಲ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ : ಅಶೋಕ್ ಕುಮಾರ್ ಕೊಡವೂರು.

154
firstsuddi

ಉಡುಪಿ : ಕೊರೊನಾ ಮಹಾಮಾರಿಯಿಂದ ಜನ ಪರದಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಇದೊಂದು ಕರುಣೆಯಿಲ್ಲದ ಜನ ವಿರೋಧಿ ಸರಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಹೇಳಿದ್ದಾರೆ.

ಇಂದು ಅವರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸರಕಾರದ ಈ ನಿಲುವನ್ನು ಖಂಡಿಸಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಮತ್ತು ರೂಪೈ ಎದುರು ಡಾಲರ್ ಮೌಲ್ಯ ಯಥಾ ಸ್ಥಿತಿ ಕಾಯ್ದುಕೊಂಡಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಲೀಟರ್ ಗೆ 28 ಪೈಸೆ ಮತ್ತು 32 ಪೈಸೆ ಏರಿಸುವ ಅಗತ್ಯ ಏನಿತ್ತು. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಸ್ಥಳೀಯ ವ್ಯತ್ಯಯದೊಂದಿಗೆ ಕನಿಷ್ಟ 92.67 ರಿಂದ ಗರಿಷ್ಟ 97.58 ರೂ. ಏರುಗತಿಯಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಲಿದೆ ಎಂದಿದ್ದಾರೆ.

ರಾಜ್ಯದಲ್ಲಿ 2018 ರ ಪ್ರಕೃತಿ ವಿಕೋಪದಡಿ ರೈತರ ಸಾಲ ಮನ್ನಾ ಮಾಡಲು ಹೇರಿದ್ದ ವಿಶೇಷ ಸೆಸ್ಸನ್ನು ಈಗಲೂ ಮುಂದುವರಿಸಲಾಗುತ್ತಿದ್ದು ಅದನ್ನು ಕೂಡಲೇ ತಡೆಹಿಡಿದು ಕೊರೊನಾ ಸಂಕಷ್ಟ ನಿಧಿಗೆ ಆ ಹಣವನ್ನು ವರ್ಗಾಯಿಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.