ದೊಡ್ಡಬಳ್ಳಾಪುರ : ಗಾಂಜಾ ನಶೆಯಲ್ಲಿದ್ದ ಗ್ಯಾಂಗ್ ಹೋಂ ಗಾರ್ಡ್ ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ಕಲ್ಲುಕೋಟೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ರಮೇಶ್ ಎಂಬುವರು ನಿನ್ನೆ ರಾತ್ರಿ ತುರುವನಹಳ್ಳಿಯಿಂದ ಕಲ್ಲುಕೋಟೆ ಗ್ರಾಮಕ್ಕೆ ಸ್ನೇಹಿತನ ಜೊತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಲ್ಲುಕೋಟೆ ಗ್ರಾಮದ ಬಳಿ ತ್ರಿಬಲ್ ರೈಡಿಂಗ್ನಲ್ಲಿ ಬಂದ ಯುವಕರ ಬೈಕ್ ರಮೇಶ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಮತ್ತು ಯುವಕರ ಗ್ಯಾಂಗ್ ನಡುವೆ ಜಗಳವಾಗಿದೆ.
ಈ ವೇಳೆ ಗಾಂಜಾ ಕಿಕ್ ನಲ್ಲಿದ್ದ ಮೂವರು ಯುವಕರಲ್ಲಿ ಓರ್ವ ಬೈಕ್ ನಲ್ಲಿ ಕುಳಿತಿದ್ರೆ, ಮತ್ತೋರ್ವ ಚಾಕು ತೋರಿಸಿ ಬೆದರಿಸಿದ್ದಾನೆ. ಮತ್ತೊರ್ವ ಕಬ್ಬಿಣದ ರಾಡಿನಿಂದ ಹೋಂ ಗಾರ್ಡ್ ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ರಮೇಶ್ ಹಾಗೂ ಆತನ ಸ್ನೇಹಿತ ಶೇಖರ್ ಅಲ್ಲಿಂದ ಭಯದಿಂದ ಓಡಿ ಹೋಗಿ ದೂರ ನಿಂತಿದ್ದಾರೆ. ಈ ವೇಳೆ ಬೈಕ್ ನ ಪೆಟ್ರೋಲ್ ಪೈಪ್ ಕಟ್ ಮಾಡಿದ ಕಿಡಿಗೇಡಿಗಳು, ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಆದರೆ ಗ್ರಾಮಸ್ಥರು ಪರಾರಿಯಾಗುತ್ತಿದ್ದ ಯುವಕರನ್ನ ಮುಂದಿನ ಊರಿನಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










