ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 50,000 ದಿಂದ 55,000 ರೂ ಸಿಗುತ್ತಿದೆ : ಸಿದ್ದರಾಮಯ್ಯ

51
firstsuddi

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ 15ನೇ ಬಾರಿ ಬಜೆಟ್ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆ ಬರೆಯಲಿದ್ದಾರೆ. ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಶುರು ಮಾಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಬಜೆಟ್ ಓದುವ ವೇಳೆ ಕಾಂಗ್ರೆಸ್ ಶಾಲು ಹಾಕಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಲಾಗಿದೆ.

ತಮ್ಮ ಬಜೆಟ್ ಭಾಷಣದಲ್ಲಿ ಸಿಎಂ, ಅನ್ನಭಾಗ್ಯ ಯೋಜನೆಗಳ ಮೂಲಕ ಕೋಟ್ಯಂತರ ಜನರ ಕೈಗೆ ಹಂಚಿಕೆ ಮಾಡಲಾಗುತ್ತಿದೆ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 50,000 ದಿಂದ 55,000 ರೂ. ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎಂ ಹೇಳಿದ್ದೇನು?
ಸಮಯ ಕಳೆದಂತೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಲಿವೆ. ಹಲವು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಮ್ಮ ಕೆಲಸದ ಅಧ್ಯಯನ ನಡೆಸಿ, ಶ್ಲಾಘಿಸಿವೆ. ಆದರೆ ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆ ದೃಢವಾಗಲು ಕೇವಲ ಈ ಅಧ್ಯಯನಗಳಷ್ಟೇ ಕಾರಣವಲ್ಲ.

ಬಸ್ ಹತ್ತುವ ಮುನ್ನ ತಲೆಬಾಗಿ ನಮಸ್ಕರಿಸಿದ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಲಕ್ಷಾಂತರ ಮಹಿಳೆಯರ ಪ್ರಾರ್ಥನೆ, ಯುವನಿಧಿಯಡಿ ನೆರವು ಪಡೆದ ನಿರುದ್ಯೋಗಿ ಯುವಕನ ಆನಂದಭಾಷ್ಪ- ಇವು ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ.

ಅಭಿವೃದ್ಧಿಯ ಫಲವನ್ನು ಅದರ ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂತಿರುಗಿಸುವುದರಲ್ಲಿ ಅನನ್ಯವಾದ ಸಂತೃಪ್ತಿಯಿದೆ. ಆದರೆ ವಿರೋಧಿಗಳು ಗ್ಯಾರಂಟಿ ಯೋಜನೆಗಳನ್ನು ಬಿಟ್ಟ ಭಾಗ್ಯಗಳೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ ಎನ್ನುತ್ತಿವೆ ಎಂದು ತಿರುಗೇಟು ನೀಡಿದರು.