ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಎನ್‍ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ.

38

ರಾಮನಗರ: ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಅವರ ನಾಮಪತ್ರ ಸಲ್ಲಿಕೆಗೂ ಮುನ್ನ, ದೇವಾಲಯಗಳಲ್ಲಿ ಕುಟುಂಬದವರೊಂದಿಗೆ ಪೂಜೆ ಸಲ್ಲಿಸಿ ನಂತರ ಬೃಹತ್ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಅದ್ಧೂರಿ ಮೆರವಣಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಾಥ್ ಕೊಡಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಅಶ್ವತ್ಥನಾರಾಯಣ್, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಜೆಡಿಸ್ ಹಾಗೂ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಚುನಾವಣಾಧಿಕಾರಿ ಕಚೇರಿವರೆಗೆ ತೆರದ ವಾಹನದಲ್ಲಿ ರೋಡ್ ಶೋಗೆ ಸಾವಿರಾರು ಮಂದಿ ಸಾಕ್ಷಿಯಾದರು. ಶೇರ್ವಾ ಸರ್ಕಲ್‍ನಿಂದ ತಹಶೀಲ್ದಾರ್ ಕಚೇರಿವರೆಗಿನ ಮೇರವಣಿಗೆಯಲ್ಲಿ ಜನಸಾಗರವೇ ತುಂಬಿತ್ತು. ಮೈತ್ರಿ ನಾಯಕರ ಮೆರವಣಿಗೆಗೆ ಕಲಾತಂಡಗಳು ಮೆರುಗು ತಂದವು. ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದು, ಇಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. ಈ ಮೂಲಕ ಚನ್ನಪಟ್ಟಣ ಉಪಚುನಾವಣೆ ತೀವ್ರ ಪೈಪೋಟಿ ಉಂಟಾಗಿದೆ.