ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ವಿಚಾರ ಕೈ ಬಿಟ್ಟ ಜಿಲ್ಲಾಡಳಿತ.

47
firstsuddi

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ರೋಪ್ ವೇ ವಿಚಾರವನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ.

ಈ ಕುರಿತಂತೆ ನಗರದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು, ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳ ಆಗುವುದಕ್ಕಿಂತ ಅದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಬೆಟ್ಟಕ್ಕೆ ಪ್ರವಾಸಿಗರು ಧಾರ್ಮಿಕ ಭಾವನೆಯಿಂದ ಬರುತ್ತಾರೆ. ಈ ಸ್ಥಳವನ್ನು ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ ಎನ್ನುವುದು ಸರ್ವರ ಅಭಿಪ್ರಾಯವಾಗಿದೆ. ಬೆಟ್ಟಕ್ಕೆ ಹೋಗಲು ರಸ್ತೆ ಮಾರ್ಗವಿದೆ, ಮೆಟ್ಟಿಲುಗಳಿವೆ ಇಷ್ಟೇ ಸಾಕು, ರೂಪ್ ವೇ ಬೇಡ ಎಂದಿದ್ದಾರೆ. ಹೀಗಾಗಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ನಿರ್ಮಾಣದ ನಿರ್ಧಾರವನ್ನು ಬಿಟ್ಟಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತವು ಪತ್ರದ ಮೂಲಕ ವಿವರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.

2022-2023 ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿ ಪಡಿಸಲು ಕೆಲವು ಯೋಜನೆಗಳನ್ನು ಘೋಷಿಸಿದ್ದರು. ಈ ವೇಳೆ ಮೈಸೂರಿನ ಚಾಮುಂಡಿ ಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದರು. ಆದರೆ ಚಾಮುಂಡಿ ಬೆಟ್ಟದ ರೋಪ್ ವೇಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ.