ಚಿಕ್ಕಮಗಳೂರು: ಜಿಲ್ಲೆಯ ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮುಂತಾದ ಧಾರ್ಮಿಕ ಗಿರಿಧಾಮಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ್ದ ವೇಳೆ ಅಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಿಳೆಯೊಬ್ಬರು ಭಾವನಾತ್ಮಕ ಪತ್ರ ಬರೆದಿದ್ದಾರೆ.
ಕನ್ನಡದಲ್ಲಿಯೇ ಪತ್ರ ಬರೆದಿರುವ ಜಡೆಮ್ಮ ಎಂಬ ಭಕ್ತೆ ತನಗಾದ ಸಂಕಷ್ಟವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮಂತಹ ಮಹಿಳೆಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸದ ಸಂಕೇತ. ನನ್ನಂತಹ ಸಾಮಾನ್ಯ ಮಹಿಳೆಯರ ನೋವನ್ನು ತಿಳಿಸುವುದು ಪತ್ರದ ಮುಖ್ಯ ಉದ್ದೇಶ ಎಂದು ಜಡೆಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ನಾವು ಕುಟುಂಬ ಸಮೇತ ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಭೇಟಿ ನೀಡಿದ್ದೇವು. ಬಾಬಾಬುಡನಗಿರಿಯಲ್ಲಿ ಮೂತ್ರ ವಿಸರ್ಜನೆಗೆ ಒತ್ತಡ ಶುರುವಾದರೂ ಬೆಟ್ಟದ ತುದಿಯಲ್ಲಿ ಎಲ್ಲೂ ಶೌಚಾಲಯಗಳಿಲ್ಲ. ಆ ಒತ್ತಡವನ್ನು ತಡೆದು ಮುಳ್ಳಯ್ಯನಗಿರಿಗೆ ಹೋದೆವು, ಆದರೆ ಅಲ್ಲಿಯೂ ಇರಲಿಲ್ಲ.
ಸೀತಾಳಯ್ಯನಗಿರಿಯಲ್ಲಿ ಹುಡುಕಿದೆವು, ಅಲ್ಲಿಯೂ ಶೌಚಾಲಯ ಇರಲಿಲ್ಲ. ಕ್ಷಣಕ್ಷಣಕ್ಕೂ ತಡೆಯಲಾರದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸಹಿಸಲು ಅಸಾಧ್ಯವಾಯಿತು ಮತ್ತು ಅವಮಾನ ಸಹಿಸಿಕೊಂಡು ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದೆ’ ಎಂದಿದ್ದಾರೆ.
‘ಪ್ರತಿದಿನವೂ ಜನರು ತಮ್ಮ ಧರ್ಮ ಮತ್ತು ದೇವರಿಗಾಗಿ ಹೋರಾಡುತ್ತಾರೆ. ಆದರೆ, ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಅವರ ನಿರ್ಲಕ್ಷ್ಯ ದುರದೃಷ್ಟಕರ. ಪ್ರಕೃತಿಯ ಕರೆಗೆ ನಾವು ಯಾವ ಧರ್ಮದವರು ಎಂಬುದನ್ನು ಮರೆತು ಅದಕ್ಕೆ ಒತ್ತು ನೀಡುತ್ತೇವೆ. ಜಗತ್ತಿನಲ್ಲಿ ಎಲ್ಲಾ ಧರ್ಮದ ಜನರು ಬಳಸುವ ಯಾವುದಾದರು ಸ್ಥಳವಿದೆ ಎಂದಾದರೆ ಅದು ಶೌಚಾಲಯವಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನೀವು ಕೂಡ ನನ್ನಂತೆ ಹೆಣ್ಣೇ. ಆದರೆ, ನೀವು ಅಧಿಕಾರದಲ್ಲಿರುವುದರಿಂದ ಮತ್ತು ನಿಮ್ಮ ಸೇವೆ ಮಾಡಲು ಜನರಿರುವುದರಿಂದ ನಾನು ಎದುರಿಸುವ ಸಮಸ್ಯೆಗಳನ್ನು ನೀವು ಎದುರಿಸುವುದಿಲ್ಲ. ಆದರೆ, ಶೌಚಾಲಯ ಇಲ್ಲದಿರುವುದು ನನ್ನಂತಹ ಮಹಿಳೆಯರ ಘನತೆಗೆ ಕುಂದು ತಂದಿದೆ. ಪ್ರಕೃತಿಯ ಕರೆಗೆ ಹಾಜರಾಗುವ ಬಗ್ಗೆ ಸಾಮಾನ್ಯ ಮಹಿಳೆಯ ಒತ್ತಡವನ್ನು ನೀವು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಕಷ್ಟಗಳು ಮಹಿಳೆಯರಿಗಷ್ಟೇ ತಿಳಿದಿದೆ. ಲಕ್ಷಾಂತರ ಜನರು ಭೇಟಿ ನೀಡುವ ಯಾತ್ರಾ ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ನಾವು ಮಂಗಳ ಗ್ರಹ ತಲುಪಿದ್ದೇವೆ. ಆದರೆ, ಈ ಯಾತ್ರಾ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.
‘ಭಾರತವು ವಿಶ್ವದಲ್ಲಿ ಮಧುಮೇಹದ ರಾಜಧಾನಿಯಾಗಿದೆ. ಅವರು ಸಾರ್ವಜನಿಕ ಶೌಚಾಲಯಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ನೀವು ಇಲ್ಲಿ ಶೌಚಾಲಯವನ್ನು ನಿರ್ಮಿಸಿದರೆ, ಕರ್ನಾಟಕದ ಜನರು ಮರೆಯುವುದಿಲ್ಲ’ ಎಂದಿದ್ದಾರೆ.










