ಚಿಕ್ಕಮಗಳೂರು : ಇಂಧನ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಯುವಕಾಂಗ್ರೆಸ್ ಪದಾಧಿಕಾರಿಗಳು ನಗರದಲ್ಲಿ ಇಂದು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಕೆ.ಎಂ.ರಸ್ತೆಯ ಎಬಿಸಿ ಮುಂಭಾಗದ ಪೆಟ್ರೋಲ್ ಬಂಕ್ ಎದುರು ಬೆಳಿಗ್ಗೆ ಜಮಾಯಿಸಿದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವುದರ ಜೊತೆಗೆ ತಟ್ಟೆಬಡಿದು, ಬಾಯಿಬಡಿದುಕೊಂಡು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಹಿಲ್ ಷರೀಫ್ ದೇಶಾದ್ಯಂತ ವ್ಯಾಪಕ ವಿರೋಧದ ನಡುವೆಯೂ ಪೆಟ್ರೋಲ್ ಬೆಲೆಯನ್ನು 100 ರ ಗಡಿ ದಾಟಿಸಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಪೆಟ್ರೋಲ್ ನ ಮೂಲ ಬೆಲೆ ಕೇವಲ 35 ರೂಪಾಯಿ ಇದ್ದರೂ ಕೇಂದ್ರ ಸರ್ಕಾರ ಪ್ರತಿ ಲೀಟರ್ ಗೆ 65 ರೂ. ತೆರಿಗೆ ಹಾಕುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರು ತತ್ತರಿಸುವಂತೆ ಮಾಡಿದೆ ಎಂದು ಆರೋಪಿಸಿದ ಅವರು ಈ ರೀತಿ ತೆರಿಗೆ ವಿಧಿಸಿದ್ದಲ್ಲಿ ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇಂಧನ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ನಡೆದಿರುವ ಪ್ರತಿಭಟನೆಗಳಿಗೆ ಪ್ರಧಾನಿಯವರು ಬೆಲೆ ಕೊಟ್ಟು ಕೂಡಲೇ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದ ರಾಹಿಲ್ ಷರೀಫ್ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆದಿತ್ಯ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಹಳ್ಳಿ ಪ್ರಕಾಶ್, ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಸುಬಾನ್, ರಫೀಕ್ ಅಹ್ಮದ್, ಪ್ರದೀಪ್, ಆಕಾಶ್, ತರೀಕೆರೆ ಸುಬಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










