ಚಿಕ್ಕಮಗಳೂರು : ಕೊರೊನಾ ಭೀತಿ ಹಿನ್ನೆಲೆ, ರಾಜ್ಯಾದ್ಯಂತ ಅ.30 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರತಿವರ್ಷ ಆಚರಿಸಲಾಗುತ್ತಿದ್ದ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮೊಹಲ್ಲಾದಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ/ ಸಾಂಸ್ಕೃತಿಕ ಕಾರ್ಯಕ್ರಮ/ ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮಸೀದಿಗಳಲ್ಲಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-19 ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ನೆರವೇರಿಸುವುದು.
ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು/ ಡಿಜಿಟಲ್ ಸೌಂಡ್ ಸಿಸ್ಟಂ ಬಳಸುವುದನ್ನು ನಿಷೇಧಿಸಲಾಗಿದೆ ಹಾಗೂ 60 ವರ್ಷ ಮೇಲ್ಪಟ್ಟ ನಾಗರೀಕರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಹಬ್ಬ ಆಚರಿಸುವುದು.
ಖಬರ್‍ಸ್ತಾನ್ ಒಳಗೊಂಡಂತೆ ಯಾವುದೇ ತೆರೆದ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ ಮತ್ತು ಈ ಕುರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.










